ಸಂಬಲ್‌ಪುರ : ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ರಾಷ್ಟ್ರದ ಏಳಿಗೆಗಾಗಿ ನಿಸ್ವಾರ್ಥವಾಗಿ ತಮ್ಮನ್ನು ಸಮರ್ಪಿಸಿಕೊಂಡವರನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಶನಿವಾರ ಅವರು ಒಡಿಸ್ಸಾದಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ‘ಲಾಲ್ ಕೃಷ್ಣ ಅಡ್ವಾಣಿ ರಾಷ್ಟ್ರಸೇವೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದರು. ಅಂತಹ ರಾಷ್ಟ್ರಭಕ್ತರನ್ನು ಕಡೆಗಣಿಸುವುದಿಲ್ಲ ಎನ್ನುವುದಕ್ಕೆ ಅವರಿಗೆ ಭಾರತ ರತ್ನ ಪುರಸ್ಕಾರ ಸಂದಿರುವುದೇ ಸಾಕ್ಷಿ‘ ಎಂದರು.
‘ಅವರು ಯಾವಾಗಲೂ ರಾಷ್ಟ್ರ ಮೊದಲು ಎಂಬ ಸಿದ್ದಾಂತದೊಂದಿಗೆ ಶಾಸನಗಳನ್ನು ರೂಪಿಸಲು ಉತ್ಸುಕರಾಗಿದ್ದರು ಭಾರತವು ವಂಶಾಡಳಿತದ ಕಪಿಮುಷ್ಟಿಯಲ್ಲಿ ನರಳುತ್ತಿತ್ತು. ಈ ವೇಳೆ ವಂಶಾಡಳಿತಕ್ಕೆ ಅವರು ಸವಾಲೆಸೆದು ಸರ್ವರನ್ನೂ ಒಳಗೊಳ್ಳುವ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಹೊಂದಿರುವಂತಹ ಪ್ರಜಾಪ್ರಭುತ್ವವನ್ನು ನಿರ್ಮಿಸುವ ಕನಸು ಕಂಡು ಅಡ್ವಾಣಿ, ಅದರಲ್ಲಿ ಯಶಸ್ವಿ ಆದರು. ಇಂತಹ ಮೇರು ನಾಯಕನ ಮಮತೆ ಮತ್ತು ಮಾರ್ಗದರ್ಶನದಲ್ಲಿ ಬೆಳೆದಿರುವ ನಾನು ಅದೃಷ್ಟವಂತನೇ ಸರಿ‘ ಎಂದು ಆಡ್ವಾಣಿಯನ್ನು ಮೋದಿ ಸ್ಮರಿಸಿದರು