ಡೆಹ್ರಾಡೂನ್: ಉತ್ತರಾಖಂಡ ಸಚಿವ ಸಂಪುಟ ಭಾನುವಾರ ಅತೀ ಮಹತ್ವದ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ಒಪ್ಪಿಗೆ ನೀಡಿದೆ. ಇದರಿಂದಾಗಿ ಸೋಮವಾರ ಆರಂಭವಾಗಲಿರುವ ವಿಧಾನ ಸಭಾ ವಿಶೇಷ ಅಧಿವೇಶನದಲ್ಲಿ ಇದರ ಮಂಡನೆಗೆ ವೇದಿಕೆ ಸಿದ್ಧವಾಗಿದೆ.
ಇದು ವಿಧಾನಸಭೆಯಲ್ಲಿ ಪಾಸಾದರೆ ಸ್ವಾತಂತ್ರ್ಯಾನಂತರ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಎಂಬ ಖ್ಯಾತಿಗೆ ಉತ್ತರಾಖಂಡ ಭಾಜನವಾಗಲಿದೆ
ಮುಖ್ಯಮಂತ್ರಿ ಪುಷ್ಕರ್ಸಿಂಗ್ ಧಾಮಿ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಸಂಪುಟ ಸಭೆಯಲ್ಲಿ ನ್ಯಾ| ರಂಜನಾ ಪ್ರಕಾಶ್ ದೇಸಾಯಿ ಅವರ ಸಮಿತಿ ಇತ್ತೀಚೆಗೆ ಸಲ್ಲಿಸಿದ ಸಂಹಿತೆಯ ಅಧ್ಯಯನ ವರದಿಯ ಬಗ್ಗೆ ಚರ್ಚಿಸಿ ಅದರ ಮಂಡನೆಗೆ ಒಪ್ಪಿಗೆ ನೀಡಲಾಯಿತು. ಮಂಗಳವಾರ ಮಂಡನೆಗೆ ತೀರ್ಮಾನಿಸಲಾಯಿತು. ಶನಿವಾರ ಸಂಪುಟದಲ್ಲಿ ಇದು ಮಂಡನೆಯಾದರೂ ಮುಂದೂಡಲಾಗಿತ್ತು ಇದು ಜಾರಿಯಾದರೆ ರಾಜ್ಯದಲ್ಲಿ ಮದುವೆ, ವಿಚ್ಚೇದನ, ಆಸ್ತಿ ಹಕ್ಕು- ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ಧರ್ಮಗಳಿಗೂ ಒಂದೇ ಕಾನೂನು ಅನ್ವಯವಾಗಲಿದೆ. ಈವರೆಗೂ ಆಯಾ ಧರ್ಮಗಳು ಬೇರೆ ವೈಯಕ್ತಿಕ ಕಾನೂನು ಅನುಸರಿಸುತ್ತಿದ್ದವು