Home » ಶ್ರೀ ಮೈಲಾರೇಶ್ವರ ದೇವಸ್ಥಾನ, ಬ್ರಹ್ಮಕಲಶೋತ್ಸವ
 

ಶ್ರೀ ಮೈಲಾರೇಶ್ವರ ದೇವಸ್ಥಾನ, ಬ್ರಹ್ಮಕಲಶೋತ್ಸವ

by Kundapur Xpress
Spread the love

ಶ್ರೀ ಮೈಲಾರೇಶ್ವರ ದೇವಸ್ಥಾನ, ಚಿಕ್ಕನ್‍ಸಾಲ್ ರಸ್ತೆ, ಕುಂದಾಪುರ

ಕುಂದಾಪುರದ ಚಿಕ್ಕನ್‍ಸಾಲ್ ರಸ್ತೆಯ ಮಧ್ಯಭಾಗದಲ್ಲಿರುವ ಶ್ರೀ ಮೈಲಾರೇಶ್ವರ ದೇವಸ್ಥಾನವು ಸುಮಾರು 800 ವರ್ಷಗಳ ಪುರಾತನ ಇತಿಹಾಸವನ್ನು ಹೊಂದಿದೆ. 1950-60ರ ದಶಕದಲ್ಲಿ ಈ ದೇವಸ್ಥಾನವು “ಮೈಲಾರ ಮಠ” ಎಂದೇ ಕರೆಯಲ್ಪಡುತ್ತಿತ್ತು. 1960ರ ದಶಕದಲ್ಲಿ ಶ್ರೀ ಮೈಲಾರೇಶ್ವರ ದೇವಸ್ಥಾನವು ಜೀರ್ಣಾವಸ್ಥೆಯಲ್ಲಿದ್ದು, ಇಲ್ಲಿ ಪೂಜೆ ಪುನಸ್ಕಾರಗಳ ಕೊರತೆಯನ್ನು ಮನಗಂಡ ಈ ಪರಿಸರದ ಹಲವು ಯುವಕರು ಹಾಗೂ ಸಮಾನ ಮನಸ್ಕರು ಒಂದು ಒಕ್ಕೂಟವನ್ನು ರಚಿಸಿಕೊಂಡರು.

1963ರಲ್ಲಿ ಅದಕ್ಕೆ “ಮಿತ್ರ ಸಮಾಜ” ಎಂದು ನಾಮಕರಣ ಮಾಡಲಾಯಿತು. ಆ ಸಂದರ್ಭದಲ್ಲಿ ದೇವಾಲಯವನ್ನು ಸುಸ್ಥಿತಿಗೆ ತಂದು ಪೂಜೆ-ಪುನಸ್ಕಾರಗಳ ವಿಧ್ಯುಕ್ತ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸುವುದು ತೀರಾ ಅಗತ್ಯವಿತ್ತು. ಮಿತ್ರ ಸಮಾಜದ ಸದಸ್ಯರು ದೇವರ ಪ್ರೀತ್ಯರ್ಥವಾಗಿ 15 ವರ್ಷಗಳ ಕಾಲ ನಡೆಸಿದ ನಿಸ್ವಾರ್ಥ ಸೇವೆಯು ದೇವತಾನುಗ್ರಹದಿಂದ ಯಶಸ್ಸನ್ನು ಕಂಡಿತು. ಈ ಮಿತ್ರ ಸಮಾಜವು 1977-78ರಲ್ಲಿ “ಶ್ರೀ ಮೈಲಾರೇಶ್ವರ ಯುವಕ ಮಂಡಲ” ಎಂಬುದಾಗಿ ಮರುನಾಮಕರಣಗೊಂಡಿತು,

ತದನಂತರದಲ್ಲಿ ದೇವಸ್ಥಾನದಲ್ಲಿ ಭಜನೆ, ಸೋಣೆಪೂಜೆ ಹಾಗೂ ಹೂವಿನಪೂಜೆ ಮುಂತಾದ ಅನೇಕ ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆದು ಬಂದವು. 1995ರಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ 1995-96ರಲ್ಲಿ ದೇವಸ್ಥಾನದ ಪುನರ್‍ಪ್ರತಿಷ್ಠೆ ಹಾಗೂ ಅಷ್ಠಬಂಧ ಬ್ರಹ್ಮಕಲಶೋತ್ಸವವು ಡಾ|| ಎಮ್.ವಿ. ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು.

ಈ ಪುಣ್ಯಕಾರ್ಯದಲ್ಲಿ ಚಿಕ್ಕನ್‍ಸಾಲ್ ರಸ್ತೆಯ ದಿ.ಮಂಜುನಾಥ ನಾಯಕ್, ದಿ.ರಿಕಾರ್ಡ್ ವೆಂಕಟರಮಣ, ದಿ.ನಾರಾಯಣ ಶೇರಿಗಾರ್‍ರವರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಊರ ಹಾಗೂ ಪರಊರ ಭಕ್ತರ ಸಹಕಾರದಿಂದ ನೂತನ ದೇವಸ್ಥಾನವು ಲೋಕಾರ್ಪಣೆಗೊಂಡಿತು. 28 ವರ್ಷಗಳ ಬಳಿಕ ಮತ್ತೆ ಅಷ್ಠಮಂಗಲ ಪ್ರಶ್ನೆಯಂತೆ ಶ್ರೀ ಮೈಲಾರೇಶ್ವರ ದೇವಸ್ಥಾನವು ಜೀರ್ಣೋದ್ಧಾರಗೊಳ್ಳಲಿದ್ದು, ಜನವರಿ 26, 27, 28 ರಂದು ಪುನರ್‍ಪ್ರತಿಷ್ಠೆ ಹಾಗೂ ಅಷ್ಠಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ.

ಈಗಾಗಲೇ ಪೂರ್ವಭಾವಿಯಾಗಿ ಎಲ್ಲಾ ಸಮಿತಿಗಳನ್ನು ರಚಿಸಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಚಪ್ಪರ ಮೂಹೂರ್ತವನ್ನು ನೆರವೇರಿಸಲಾಗಿದೆ. ಜನವರಿ 25ರಂದು ಬಹ್ಮಕಲಶೋತ್ಸವ ನಿಮಿತ್ತ ಹೊರೆಕಾಣಿಕೆಯ ಪುರಮೆರವಣಿಗೆಯೊಂದಿಗೆ ಪ್ರಾರಂಭವಾಗಲಿದೆ. ದಿನಾಂಕ: 26.01.2023ನೇ ಗುರುವಾರ ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಂಜೆ 7 ರಿಂದ ಭಜನೆ,

ದಿನಾಂಕ: 27.01.2023ನೇ ಶುಕ್ರವಾರ ಬೆಳಿಗ್ಗೆ ಪುಣ್ಯಾಹ, ಗಂಟೆ 9.05ಕ್ಕೆ ಸರಿಯಾಗಿ ರತ್ನನ್ಯಾಸಪೂರ್ವಕ ಶ್ರೀ ಮೈಲಾರೇಶ್ವರ ಮತ್ತು ಪರಿವಾರ ದೇವರುಗಳ ಅಷ್ಠಬಂಧ ಪ್ರತಿಷ್ಠೆ, ಮಧ್ಯಾಹ್ನ 12.30 ರಿಂದ ಅನ್ನಸಂತರ್ಪಣೆ, ರಾತ್ರಿ 9ಕ್ಕೆ ಭಾವ, ಯೋಗ, ಗಾನ ನೃತ್ಯ ಪ್ರದರ್ಶನ. ದಿನಾಂಕ: 28.01.2023ನೇ ಶನಿವಾರ ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳು ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಅನ್ನಸಂತರ್ಪಣೆ, ರಾತ್ರಿ 9ಕ್ಕೆ ಸಂಗೀತ ಗಾನ ಸಂಭ್ರಮ ನಡೆಯಲಿದ್ದು, ಮೇಲಿನ ಎಲ್ಲಾ ಕಾರ್ಯಕ್ರಮಗಳಿಗೂ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಮತ್ತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು  ವಿನಂತಿಸಿಕೊಂಡಿದ್ದಾರೆ.     .ಗಣೇಶ ಹೆಗ್ಡೆ

   

Related Articles

error: Content is protected !!