ಬೈಂದೂರು : ಕರ್ನಾಟಕ ಸರ್ಕಾರದ ಇಂದಿನ ಬಜೆಟ್ ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸುವ ಬಜೆಟ್ ಆಗಿದೆ. ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಶಸ್ವಿಯಾಗಿದ್ದಾರೆ. ಅಧಿಕಾರಕ್ಕೆ ಬಂದ ಒಂಬತ್ತು ತಿಂಗಳಿನಲ್ಲಿ ಜನರ ಮೇಲೆ ಸಾಲದ ಹೊರೆಯನ್ನು ಹೊರಿಸಿದ್ದಷ್ಟೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ರಾಜ್ಯದ ಜನತೆ ಕೇಳದೆ ಇದ್ದ ಭಾಗ್ಯಗಳನ್ನು ನೀಡಲು ಹೋಗಿ ಜನರ ಮೇಲೆ ಈಗ ಸಾಲ ಭಾಗ್ಯವನ್ನೂ ಕಾಂಗ್ರೆಸ್ ಸರ್ಕಾರ ಕರುಣಿಸಿದೆ.
ಜನರ ಮೇಲೆ ತೆರಿಗೆ ಬರವನ್ನು ನಿರ್ದಾಕ್ಷಿಣ್ಯವಿಲ್ಲದೆ ಹೇರಲಾಗಿದೆ. ಈ ಸರ್ಕಾರದಲ್ಲಿ ಎಲ್ಲವೂ ತುಟ್ಟಿಯಾಗುತ್ತಿದೆ. ಯಾವುದೇ ದೂರದೃಷ್ಟಿ ಇಲ್ಲದೆ ಮಂಡಿಸಿದ ಬಜೆಟ್ ಇದಾಗಿದೆ. ರಾಜ್ಯದ ಕೃಷಿ, ಕೈಗಾರಿಕೆ, ಮೀನುಗಾರಿಕೆ ಸೇರಿದಂತೆ ಯಾವುದೇ ವಲಯಕ್ಕೆ ಹೇಳಿಕೊಳ್ಳುವಂತಹ ಯಾವುದೇ ಅನುದಾನವನ್ನು ಸಿದ್ದರಾಮಯ್ಯ ನೀಡಿಲ್ಲ. ಯುವಜನತೆಯನ್ನಂತೂ ಕತ್ತಲಲ್ಲಿ ಇರಿಸುವ ಕೆಲಸವನ್ನು ಈ ಬಜೆಟ್ ಮಾಡಿದೆ. ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದ್ದ ರಾಜ್ಯವನ್ನು ಈಗ ಎರಡು ದಶಕಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ಜನರಿಗೆ ನಯಾಪೈಸೆಯ ಉಪಕಾರ ಇಲ್ಲದ ಬಜೆಟ್ ಇದು.
ಲೋಕಸಭಾ ಚುನಾವಣೆ ದೃಷ್ಟಿಯಿಂದ ಅಲ್ಪಸಂಖ್ಯಾತರನ್ನು ಒಲೈಸಲು ಮಾಡಿರುವ ಕಸರತ್ತಿನಂತಿದೆ ಈ ಬಜೆಟ್. ಮಂಡನೆ ವೇಳೆ ಕೇಂದ್ರ ಸರ್ಕಾರವನ್ನು, ಪ್ರಧಾನಿ ಮೋದಿ ಅವರನ್ನು ದೂಷಿಸುತ್ತಾ ಬಜೆಟ್ ಮಂಡಿಸುತ್ತಿದ್ದೇನೆ ಎಂಬ ವಿಚಾರವನ್ನು ಮರೆತು ಒಂದು ಚುನಾವಣಾ ಭಾಷಣದಂತೆ ಮಾಡುವ ಮೂಲಕ ರಾಜ್ಯದ ಜನರಿಗೆ ಸಿದ್ದರಾಮಯ್ಯ ದ್ರೋಹ ಬಗೆದಿದ್ದಾರೆ ಎಂದು ಪತ್ರಿಕಾ ಪ್ರಕಟನೆಯ ಮೂಲಕ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ತಿಳಿಸಿದ್ದಾರೆ