ನವದೆಹಲಿ: ಲೋಕಸಭೆಯ ಸಾರ್ವತ್ರಿಕ ಚುನಾವಣೆ ಏಪ್ರಿಲ್, ಮೇ ತಿಂಗಳಿನಲ್ಲಿ ನಡೆಯುವ ನಿರೀಕ್ಷೆ ಇದ್ದು, ಮಾ.10 ರ ಬಳಿಕ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಚುನಾವಣೆ ಸಿದ್ಧತೆ ಪರಿಶೀಲನೆ ಸಲುವಾಗಿ ಆಯೋಗ ಈಗಾಗಲೇ ಹಲವಾರು ರಾಜ್ಯಗಳಿಗೆ ಭೇಟಿ ನೀಡುತ್ತಿದೆ. ಆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ದಿನಾಂಕ ಘೋಷಿಸಲಾಗುತ್ತದೆ. ಸದ್ಯ ತಮಿಳುನಾಡಿನಲ್ಲಿ ಆಯೋಗ ಪರಿಶೀಲನೆ ಸಭೆ ನಡೆಸುತ್ತಿದೆ. ಬಳಿಕ ಉತ್ತರಪ್ರದೇಶ ಹಾಗೂ ಜಮ್ಮು- ಕಾಶ್ಮೀರಕ್ಕೆ ತೆರಳಲಿದೆ. ಈ ಭೇಟಿಗಳು ಮುಗಿದ ಬಳಿಕ ದಿನಾಂಕ ಪ್ರಕಟ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
2014ರಲ್ಲಿ ಮಾ.5ಕ್ಕೆ ಚುನಾವಣೆ ಘೋಷಣೆಯಾಗಿತ್ತು. 2019ರಲ್ಲಿ ಮಾ.10ಕ್ಕೆ ಚುನಾವಣೆ ಘೋಷಣೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಮಾ.3 ರಂದು ಮಂತ್ರಿ ಪರಿಷತ್ ಸಭೆ ಕರೆದಿದ್ದು, ಅದರಲ್ಲಿ ಚುನಾವಣೆಯ ಬಗ್ಗೆ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ.