ಕುಂದಾಪುರ | ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಳಹಳ್ಳಿಯಲ್ಲಿ ನಡೆಯುತ್ತಿರುವ ಪ್ರಸಕ್ತ ಶೈಕ್ಷಣಿಕ ವರ್ಷದ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಶೈಕ್ಷಣಿಕ ಕಾರ್ಯಕ್ರಮದ ಭಾಗವಾಗಿ ʼನಿರೂಪಣೆಯ ಕೌಶಲ್ಯʼದ ಕುರಿತು ಉಪನ್ಯಾಸಕ, ಖ್ಯಾತ ನಿರೂಪಕ ಅಕ್ಷಯ್ ಹೆಗ್ಡೆ ಮೊಳಹಳ್ಳಿ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಅವರು ಮಾತನಾಡಿ, ನಿರೂಪಣೆ ಒಂದು ಕಲೆಯು ಹೌದು, ಕೌಶಲ್ಯವು ಹೌದು. ನಿರೂಪಕನೊಬ್ಬನು ಎಷ್ಟೇ ಕಾರ್ಯಕ್ರಮ ನಿರೂಪಿಸಿದರೂ ಪ್ರತಿ ಕಾರ್ಯಕ್ರಮವೂ ಅವನಿಗೆ ಹೊಸತೆ ಆಗಿರುತ್ತದೆ. ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೆ ನಿರೂಪಕ ಒಂದು ಕೊಂಡಿಯಾಗಿರುತ್ತಾನೆ. ನಿರೂಪಣೆಗೆ ಸಿದ್ಧ ಸೂತ್ರಗಳು ಅಂತ ಇರೋದಿಲ್ಲ. ಅಭ್ಯಾಸಗಳು ಮತ್ತು ಪ್ರಯೋಗಗಳೇ ನಿರೂಪಕನೊಬ್ಬನನ್ನು ಪರಿಪಕ್ವವಾಗಿಸುತ್ತದೆ ಎನ್ನತ್ತಲೇ ಶಿಬಿರಾರ್ಥಿಗಳಿಗೆ ಅನೇಕ ಉಪಯುಕ್ತ ಮಾಹಿತಿ ನೀಡಿದರು.
ಬಸ್ರೂರು ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ| ದಿನೇಶ್ ಹೆಗ್ಡೆ ಮೊಳಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಾಲೇಜು ಆಡಳಿತ ಮಂಡಳಿಯ ಸದಸ್ಯ ಡಾ| ಅತುಲ್ ಕುಮಾರ್ ಶೆಟ್ಟಿ, ಮೊಳಹಳ್ಳಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ವೇದಮೂರ್ತಿ ಶ್ರೀಧರ ಉಡುಪ ಕರಿಗುಡಿ, ಸ. ಹಿ .ಪ್ರಾ. ಶಾಲೆ ಮೊಳಹಳ್ಳಿಯ ಸಹಶಿಕ್ಷಕ ಗಣೇಶ ಶೆಟ್ಟಿ, ಶ್ರೀ ಚಂದಯ್ಯ ಶೆಟ್ಟಿ ಬಾಗಳಕಟ್ಟೆ, ಕನ್ನಡ ಪ್ರಾಧ್ಯಾಪಕಿ ರೇಷ್ಮಾ ಶೆಟ್ಟಿ, ಶಿಬಿರಾಧಿಕಾರಿ ದೀಪಾ ಪೂಜಾರಿ, ಪ್ರಾಕ್ತಾನ ವಿಧ್ಯಾರ್ಥಿಗಳಾದ ಸಂಪತ್ ಶೆಟ್ಟಿ, ಪ್ರದೀಕ್ಷ ಜೆ. ಶೆಟ್ಟಿ ಉಪಸ್ಥಿತರಿದ್ದರು.
ಉಪಪ್ರಾಂಶುಪಾಲ ಹಾಗೂ ಶಿಬಿರಾಧಿಕಾರಿ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಸ್ವಯಂ ಸೇವಕರಾದ ರಶ್ಮಿತಾ ಜೈನ್ ಪರಿಚಯಿಸಿ, ಆಕಾಶ್ ವಂದಿಸಿ, ಶ್ರೇಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.