ಶಿಕಾರಿಪುರ : ಅಯೋಧ್ಯೆಯಲ್ಲಿ ಇದೀಗ ರಾಮಮಂದಿರ ನಿರ್ಮಾಣವಾಗಿದೆ. ಮುಂದೆ ಇನ್ನೂ ಎರಡು ಪುಣ್ಯ ಕ್ಷೇತ್ರವನ್ನು ಮಸೀದಿ ಮುಕ್ತ ಮಾಡಲಿದ್ದೇವೆ ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು. ಗುರುವಾರ ಪಟ್ಟಣದ ಹಳೇಸಂತೆ ಮೈದಾನದ ಬಳಿಯಿರುವ ಶ್ರೀ ಮಾರಿಕಾಂಬ ಬಯಲು ರಂಗ ಮಂದಿರದಲ್ಲಿ ಬಿಜೆಪಿ ವತಿಯಿಂದ ನಡೆದ ಹಿಂದುಳಿದ ವರ್ಗಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಹಿಂದುಗಳ ಅವಿರತ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಅದೇ ರೀತಿ ಮಥುರಾ, ಕಾಶಿಯನ್ನು ಮಸೀದಿಯಿಂದ ಮುಕ್ತಗೊಳಿಸಲಾಗುವುದು. ಈಗಾಗಲೇ ಸುಪ್ರೀಂ ಕೋರ್ಟಿನ ತೀರ್ಪು ದೇಶದ ಹಿಂದುಗಳ ಪರವಾಗಿದ್ದು, ಈ ಎರಡೂ ಪುಣ್ಯ ಕ್ಷೇತ್ರಗಳು ಮಸೀದಿ ಮುಕ್ತವಾಗುವುದು ಶತಃಸಿದ್ದ ಎಂದರು. ಕನಕದಾಸರು ಇಡೀ ಹಿಂದೂ ಸಮಾಜವನ್ನು ಒಗ್ಗೂಡಿಸಿಕೊಂಡು ಹೋದ ಮಹಾನ್ ಮಾನವತಾವಾದಿ. ಅವರ ಹೆಸರಿನಲ್ಲೂ ಕಾಂಗ್ರೆಸ್ಸಿಗರು ಜಾತಿ ಮಾಡುತ್ತಿರುವುದು ಶೋಚನಿಯ. ಈ ಚುನಾವಣೆ ಮೂಲಕ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿಸುವ ಮೂಲಕ ಧರ್ಮ, ದೇಶ ಉಳಿಸಬೇಕು ಎಂದು ತಿಳಿಸಿದರು.