ಬೆಂಗಳೂರು : ಕುಂದಲಹಳ್ಳಿ ಸಮೀಪದ ‘ದಿ ರಾಮೇಶ್ವರಂ ಕೆಫೆ’ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಕೆಫೆಯಲ್ಲಿ ಬಾಂಬ್ ಇಟ್ಟಿದ್ದ ಶಂಕಿತ ವ್ಯಕ್ತಿ ಎನ್ನಲಾದ ತಂಪು ಕನ್ನಡಕಧಾರಿಗೆ ತೀವ್ರ ಹುಡುಕಾಟ ನಡೆಸಿದ್ದಾರೆ.
ಕೆಫೆ ಸಮೀಪದ ಬಸ್ ನಿಲ್ದಾಣದ ಪಕ್ಕದ ಕಟ್ಟಡದ ಸಿಸಿಟಿವಿ ಕ್ಯಾಮೆರಾದಲ್ಲಿ ಕಣ್ಣಿಗೆ ತಂಪು ಕನ್ನಡಕ, ತಲೆಗೆ ಕ್ಯಾಪ್ ಹಾಕಿದ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿದ ವ್ಯಕ್ತಿ ಓಡಾಡುವ ದೃಶ್ಯವು ಪತ್ತೆಯಾಗಿದೆ. ಈ ದೃಶ್ಯದಲ್ಲಿದ್ದ ವ್ಯಕ್ತಿಗೂ ರಾಮೇಶ್ವರಂ ಕೆಫೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ವ್ಯಕ್ತಿಗೂ ಸ್ವಲ್ಪ ಸಾಮ್ಯತೆ ಕಂಡುಬಂದಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಕೆಫೆಗೆ ಬಾಂಬ್ ಇಟ್ಟ ಬಳಿಕ ಶಂಕಿತ ಕುಂದಲಹಳ್ಳಿಯಲ್ಲಿ ಬಸ್ ಹತ್ತಿ ಕಾಡುಗೋಡಿಯಲ್ಲಿ ಇಳಿದಿದ್ದಾನೆ. ಬಳಿಕ ಆತ ಎಲ್ಲಿಗೆ ಹೋದ ಎಂಬ ಬಗ್ಗೆ ಸ್ಪಷ್ಟ ಸುಳಿವು ಸಿಕ್ಕಿಲ್ಲ.