ಮಹಾ ಶಿವರಾತ್ರಿ ಮಾಘ ಮಾಸದ ಕೃಷ್ಣ ಪಕ್ಷದ ಬಹುಳ ಚತುರ್ದಶಿಯ ದಿನ ಆಚರಿಸಲಾಗುತ್ತದೆ ದಿನವಿಡೀ ಪೂಜೆ ಉಪವಾಸ ಜಾಗರಣೆ ಮಾಡಿ ಪರಮ ಶಿವನನ್ನು ಆರಾಧಿಸುವ ಸಂಪ್ರದಾಯವೇ ಮಹಾ ಶಿವರಾತ್ರಿ
ಭಾರತದಲ್ಲಿ ವರ್ಷಕ್ಕೆ 365 ಹಬ್ಬಗಳಿದ್ದವು. ಆಮೇಲೆ 30-60 ಹಬ್ಬಗಳಾಯಿತು. ಅದು ಕುಸಿದು ಈಗ 5-6 ಹಬ್ಬಗಳನ್ನು ಆಚರಿಸುವುದೇ ಕಷ್ಟವಾಗಿದೆ. ಸೌರಮಂಡಲವನ್ನು ಆಧರಿಸಿ ಹಬ್ಬಗಳನ್ನು ಆಚರಿಸಲಾಗುತ್ತದೆ. ಮಾನವನ ಶರೀರವನ್ನು ಮಾಡಲು ಸೌರಮಂಡಲ ಕುಂಬಾರನಂತೆ ಕೆಲಸ ಮಾಡುತ್ತದೆ. ಪಂಚಭೂತಗಳಿಂದಾದ ಶರೀರ ಪಂಚಭೂತಗಳಲ್ಲೇ ಲೀನವಾಗುತ್ತದೆ
ಉಪವಾಸ ಎಂದರೆ, ಉಪ = ಹತ್ತಿರ, ವಾಸ = ಇರುವುದು. ಉಪವಾಸ ಅಂದರೆ ಸಾನಿಧ್ಯ ಅಂತ. ಭಗವಂತನ ಸಮೀಪವಿದ್ದು ಧ್ಯಾನ ಮಾಡುವುದು. ಮನಸೆಂಬ ಮರ್ಕಟವನ್ನು ಭಗವಂತನ ಸಾನಿಧ್ಯದಲ್ಲಿ ತಂದು ನಿಲ್ಲಿಸುವುದೇ ಉಪವಾಸ.
ಶಿವರಾತ್ರಿ ಶಿವನ ಹಬ್ಬ. ಶಿವನ ಭಕ್ತರಾದ ನಮ್ಮೆಲ್ಲರ ಹಬ್ಬ. ಪರಮಶಿವನಿಗೆ ಪೂಜೆ ಮಾಡಲು ರಾಹುಕಾಲ ಗುಳಿಕಕಾಲ ಅಂತೇನಿಲ್ಲ, ಬೆಳಗ್ಗೆಯಿಂದ ಶುಚಿರ್ಭೂತರಾಗಿ ಭಯದಿಂದ ಅಲ್ಲ ಭಕ್ತಿಯಿಂದ ಪೂಜೆ ಮಾಡಬೇಕು.
4 ಯಾಮಗಳಲ್ಲಿ ಪೂಜೆ ಮಾಡಿ ಉಪವಾಸವಿದ್ದು ಜಾಗರಣೆ ಮಾಡಬೇಕು. ಕತ್ತಲು, ಅಂಧಕಾರ ಮತ್ತು ಅಜ್ಞಾನದ ಮೇಲೆ ಹತೋಟಿ ಸಾಧಿಸಲು ಪ್ರಕಾಶ ಮತ್ತು ಸೃಜನಶೀಲತೆಯನ್ನು ಸೃಷ್ಟಿಸಲು ಮೌನವಾದ ಜಾಗರಣೆ ಮಾಡಲಾಗುತ್ತದೆ. ಮಾರನೇ ದಿನ ಹಗಲಿನಲ್ಲಿ ಮಲಗಬಾರದು.ಎಲ್ಲಾ ಹಬ್ಬಗಳನ್ನು ಹಗಲಿನಲ್ಲಿ ಆಚರಿಸಲಾಗುತ್ತದೆ. ಆದರೆ ಶಿವರಾತ್ರಿಯನ್ನು ರಾತ್ರಿ ಸಮಯದಲ್ಲಿ ಆಚರಿಸಲಾಗುತ್ತದೆ. ರಾತ್ರಿ ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಬೆಳಗಿಸು ಎಂದು ಆ ಶಿವನನ್ನು ಬೇಡುವ ದಿನವೇ ಶಿವರಾತ್ರಿ.
ಸ್ವರ್ಣ ಕುಂದಾಪುರ