ಭಟ್ಕಳ : ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳ ವೈದ್ಯ ಅವರು ಶನಿವಾರ ಸಂಜೆ ಭಟ್ಕಳ ತಾಲೂಕಿನ ಬೆಳಕೆಯ ಸಮುದ್ರದಲ್ಲಿ ಕೆಲ ಹೊತ್ತು ಈಜುವ ಮೂಲಕ ಸಮದ್ರದಲ್ಲಿ ಕೃತಕ ಬಂಡೆ ಸ್ಥಾಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮುದ್ರದಲ್ಲಿ ಈಜುತ್ತಾ ಶವಾಸನ ಮಾಡಿದರು. ಕೃತಕ ಬಂಡೆ ಸ್ಥಾಪನೆ ಯೋಜನೆ ಬಗ್ಗೆ ಸಂತಸ ಪಟ್ಟು, ಇಂತಹ ಯೋಜನೆಯಿಂದ ಮೀನುಗಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಯೋಜನೆಯನ್ನು ಸ್ವತಃ ಅನುಷ್ಠಾನಗೊಳಿಸಿದ್ದಕ್ಕೆ ಖುಷಿ ಇದೆ. ಹೀಗಾಗಿಯೇ ಸಮುದ್ರದಲ್ಲಿ ಕೆಲ ಹೊತ್ತು ಈಜಿದ್ದೇನೆ. ನಾನು ಸಣ್ಣವನಿರುವಾಗಲೇ ಈಜು ಕಲಿತಿದ್ದರೂ ಹಲವು ವರ್ಷಗಳ ಕಾಲ ನೀರಿಗಿಳಿದು ಈಜಲು ಸಾಧ್ಯವಾಗಿರಲಿಲ್ಲ. ಈಜು ಆರೋಗ್ಯಕ್ಕೆ ಒಳ್ಳೆಯದು, ಎಲ್ಲರೂ ಈಜು ಕಲಿತರೆ ಉತ್ತಮ ಎಂದು ಹೇಳಿದರು. ಸಚಿವರು ಈಜುವ ಬಗ್ಗೆ ಅಧಿಕಾರಿಗಳಿಗಾಗಲಿ, ಅವರ ಬೆಂಬಲಿಗರಿಗಾಗಲಿ ಯಾವುದೇ ಮಾಹಿತಿ ಇರಲಿಲ್ಲ.