Home » ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದವರ ಬಗ್ಗೆ ನಿಮ್ಮ ನಿಲುವೇನು
 

‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದವರ ಬಗ್ಗೆ ನಿಮ್ಮ ನಿಲುವೇನು

ನಗರಾಧ್ಯಕ್ಷ ದಿನೇಶ್ ಅಮೀನ್ ಪ್ರಶ್ನೆ

by Kundapur Xpress
Spread the love

ಉಡುಪಿ : ರಾಜ್ಯ ಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ನ ನಾಸೀರ್ ಹುಸೇನ್‌ ಸಂಭ್ರಮಾಚರಣೆ ಸಂದರ್ಭದಲ್ಲಿ ಅವರ ಬೆಂಬಲಿಗರು ವಿಧಾನ ಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಕೂಗಿದ ಬಗ್ಗೆ ವರದಿ ಮಾಡಿದ ಪತ್ರಕರ್ತರ ವಿರುದ್ಧ ಮಾತನಾಡಿದ್ದ ಎಂ.ಜಿ‌. ಹೆಗ್ಡೆ ನಡೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಕ್ರಮವನ್ನು ಪ್ರಶ್ನಿಸಿ ಪತ್ರಿಕಾ ಹೇಳಿಕೆ ನೀಡಿದ್ದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಅವರಿಗೆ ವಿಧಾನ ಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದವರ ಬಗ್ಗೆ ನಿಮ್ಮ ನಿಲುವೇನು? ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್ ಪ್ರಶ್ನಿಸಿದ್ದಾರೆ.

ಎಂ. ಜಿ. ಹೆಗ್ಡೆಯವರು ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ದೇಶದ್ರೋಹಿಗಳನ್ನು ಸಮರ್ಥಿಸುವ ಭರದಲ್ಲಿ ‘ಈ ವಿಷಯ ಎಫ್.ಎಸ್.ಎಲ್. ವರದಿಯಲ್ಲಿ ಸುಳ್ಳು ಎಂದು ದೃಢವಾಗುತ್ತದೆ. ಆಗ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎನ್ನುವ ವಿಚಾರವನ್ನು ಮಾಧ್ಯಮದಲ್ಲಿ ವರದಿ ಮಾಡಿ ಪ್ರಶ್ನಿಸಿದ್ದ ನಿರೂಪಕರ ಮುಖಕ್ಕೆ ಉಗಿಯಬೇಕು’ ಎನ್ನುವ ಅತಿ ಬುದ್ಧಿವಂತಿಕೆಯ ಮಾತನ್ನು ಉಲ್ಲೇಖಿಸಿದ್ದರು.

ಬಳಿಕ ಎಫ್.ಎಸ್.ಎಲ್. ವರದಿಯಲ್ಲಿ ನಾಸೀರ್ ಹುಸೇನ್ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿರುವುದು ದೃಢವಾಗಿರುವ ಕುರಿತು ವರದಿ ಬಂದಿರುವುದರಿಂದ ಪಾಕಿಸ್ತಾನದ ಪರ ಘೋಷಣೆ ಕೂಗಿದವರ ಪರವಾಗಿ ನಿಂತ ಎಂ.ಜಿ. ಹೆಗ್ಡೆ ವಿರುದ್ಧ ಎಲ್ಲೆಡೆ ಜನಾಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ‘ಮುಖಕ್ಕೆ ಉಗಿಯುವ’ ಅಭಿಯಾನದ ಕುರಿತು ಕರೆ ನೀಡಿದ್ದ ಎಂ.ಜಿ. ಹೆಗ್ಡೆಯವರಿಗೆ ಉಡುಪಿಯಲ್ಲಿ ನಡೆದ ಸಾರ್ವಜನಿಕ ಪ್ರತಿಭಟನೆಯಲ್ಲಿ ತಕ್ಕ ಶಾಸ್ತಿಯಾಗಿದೆ ಎಂದು ಅಮೀನ್ ಪ್ರತಿಕ್ರಯಿಸಿದ್ದಾರೆ.

ತಮ್ಮ ಪಕ್ಷದ ಅಸಮರ್ಪಕ ನಕಲಿ ಗ್ಯಾರಂಟಿಗಳಿಗೆ ಹಾಗೂ ಒಂದೇ ವರ್ಗದ ಓಲೈಕೆಗಾಗಿ ರಾಜ್ಯದ ಜನತೆಯ ತೆರಿಗೆ ಹಣವನ್ನು ಬೇಕಾಬಿಟ್ಟಿ ಪೋಲು ಮಾಡಿ ರಾಜ್ಯವನ್ನು ದಿವಾಳಿಯ ಅಂಚಿಗೆ
ದೂಡಿರುವ ಜೊತೆಗೆ ರಾಜ್ಯದ ಅಭಿವೃದ್ಧಿಗಾಗಿ ಶಾಸಕರ ಅನುದಾನದ ಚಿಕ್ಕಸನ್ನೂ ಬಿಡುಗಡೆ ಮಾಡದ ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಪ್ರಶ್ನಿಸುವ ಬದಲು ಉಡುಪಿಯ ಕ್ರಿಯಾಶೀಲ ಶಾಸಕರ ಕಾರ್ಯವೈಖರಿಯ ಬಗ್ಗೆ ಲಘುವಾಗಿ ಮಾತನಾಡುವ ರಮೇಶ್ ಕಾಂಚನ್ ನಡೆ ಹಾಸ್ಯಾಸ್ಪದವಾಗಿದೆ.

ಸದಾ ದೇಶ ವಿರೋಧಿಗಳ, ದೇಶ ದ್ರೋಹಿಗಳ ಮತ್ತು ಭಯೋತ್ಪಾದಕರ ಪರ ನಿಲ್ಲುವ ಕಾಂಗ್ರೆಸ್ ಪಕ್ಷ ದೇಶದ ಸಮಗ್ರತೆ, ಅಖಂಡತೆ ಮತ್ತು ಏಕತೆಯ ಬಗ್ಗೆ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ. ತಾವು ಈ ಹಿಂದೆ ಯಾವ ಮಾದರಿಯಲ್ಲಿ ಪ್ರತಿಭಟನೆಯನ್ನು ನಡೆಸಿದ್ದೀರಿ, ಅದರ ಪರಿಣಾಮ ಏನಾಗಿದೆ ಎಂಬುದನ್ನು ಮರೆತು ಉಡುಪಿ ಶಾಸಕರಿಗೆ ಬುದ್ಧಿವಾದ ಹೇಳಲು ಹೊರಟಿರುವ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ದೇಶದ್ರೋಹಿಗಳ ಬಗ್ಗೆ ತಮ್ಮ ಹಾಗೂ ತಮ್ಮ ಪಕ್ಷದ ನಿಲುವು ಏನು ಎಂಬುದನ್ನು ಮೊದಲು ಸ್ಪಷ್ಟಪಡಿಸುವುದು ಉತ್ತಮ ಎಂದು ದಿನೇಶ್ ಅಮೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

   

Related Articles

error: Content is protected !!