ಬೆಂಗಳೂರು : ಕೇಂದ್ರ ಕೃಷಿ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಈ ಬಾರಿ ತಮ್ಮ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ತೊರೆದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ. ಹಾಗೊಂದು ವೇಳೆ ಶೋಭಾ ಅವರು ಉಡುಪಿ- ಚಿಕ್ಕಮಗಳೂರು ಕ್ಷೇತ್ರ ತೊರೆದಲ್ಲಿ ಆ ಕ್ಷೇತ್ರದಿಂದ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಬಹುದು. ಪೂಜಾರಿ ಅವರನ್ನು ಬಿಟ್ಟರೆ ಮಾಜಿ ಸಚಿವರಾದ ಸಿ.ಟಿ.ರವಿ, ಪ್ರಮೋದ್ ಮಧ್ವರಾಜ್ ಅವರ ಹೆಸರನ್ನೂ ಪರಿಗಣಿಸಬಹುದು ಎಂಬ ಮಾತು ಕೇಳಿಬರುತ್ತಿದೆ.
ಶೋಭಾ ಕರಂದ್ಲಾಜೆ ಅವರ ವಿರುದ್ದ ಕ್ಷೇತ್ರದಲ್ಲಿ ವ್ಯಾಪಕ ಅಭಿಯಾನ ನಡೆಯುತ್ತಿರುವುದು ಮತ್ತು ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರು ಸ್ಪರ್ಧಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಈ ಬಾರಿ ಕಷ್ಟವಾಗಬಹುದು ಎಂಬ ಅಂಶದ ಬಗ್ಗೆ ಮಂಗಳವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ..
ಈ ನಡುವೆ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ಘೋಷಿಸಿ ಮತ್ತೆ ತಮ್ಮ ನಿಲುವು ಬದಲಿಸಿದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅವರಿಗೆ ಈ ಬಾರಿ ಟಿಕೆಟ್ ನೀಡುವುದು ಅನುಮಾನಎನ್ನಲಾಗುತ್ತಿದೆ. ಆ ಜಾಗಕ್ಕೆ ಶೋಭಾ ಅವರನ್ನು ಕರೆತರುವ ಬಗ್ಗೆ ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮೇಲಾಗಿ ಶೋಭಾ ಅವರು ಈ ಹಿಂದೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುವ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡಿದ ಪ್ರಭಾವವಿದೆ. ಜತೆಗೆ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದು ಅದೇ ಸಮುದಾಯಕ್ಕೆ ಸೇರಿದ ಶೋಭಾ ಅವರಿಗೆ ನೆರವಾಗಬಹುದು ಎಂಬ ಲೆಕ್ಕಾಚಾರವೂ ಅಡಗಿದೆ.