ಉಡುಪಿ : ಬಿಜೆಪಿ ಆರೋಪಿಸುವಂತೆ, ರಾಜ್ಯ ಸರ್ಕಾರಕ್ಕೆಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಹಣಕಾಸಿನ ಯಾವುದೇ ಸಮಸ್ಯೆಗಳಿಲ್ಲ. ಈ ಸಾಲಿನಲ್ಲಿ ಗ್ಯಾರಂಟಿ ಯೋಜನೆಗಳಿಗೆ 36,000 ಕೋಟಿ ರು. ವ್ಯಯಿಸಿದ್ದೇವೆ. ಮುಂದಿನ ಸಾಲಿಗೆ 52,000 ಕೋಟಿ ರು. ಮೀಸಲಿರಿಸಿದ್ದೇವೆ ಎಂದು ಮಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಬುಧವಾರ ಉಡುಪಿ ಜಿಲ್ಲಾಡಳಿತದ ವತಿಯಿಂದ ನಡೆದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಉಡುಪಿ ಜಿಲ್ಲೆಯ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯದ ಬೊಕ್ಕಸ ದಿವಾಳಿಯಾಗಿದೆ, ಅಭಿವೃದ್ಧಿಗೆ ಹಣ ಸಾಕಾಗುತ್ತಿಲ್ಲ ಎಂದು ಬಿಜೆಪಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದೆ. ದಿವಾಳಿಯಾಗಿದ್ದರೆ ಉಡುಪಿ ಜಿಲ್ಲೆಯಲ್ಲಿ ಇಷ್ಟು ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಸಾಧ್ಯವಾಗುತ್ತಿತ್ತೇ ಎಂದವರು ಪ್ರಶ್ನಿಸಿದರು. ಅಭಿವೃದ್ಧಿ ಕಾಮಗಾರಿಗಳಿಗಾಗಿಯೇ 1,20,000 ಕೋಟಿ ರು. ಹಣ ಇಟ್ಟಿದ್ದೇವೆ ಎಂದರು
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿಯೇ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಸಮಿತಿಗಳನ್ನು ರಚಿಲಾಗಿದೆ. ಈ ಸಮಿತಿಗಳಿಂದ ಸರ್ಕಾರ ದುಂದುವೆಚ್ಚ ಮಾಡುತ್ತಿದೆ ಎಂದೂ ಬಿಜೆಪಿ ಆರೋಪಿಸಿದೆ. ಯೋಜನೆಗಳು ನಿಜವಾದ ಅರ್ಹರಿಗೆ ತಲುಪಿಸುವುದಕ್ಕಾಗಿಯೇ ಸಮಿತಿಗಳನ್ನು ರಚಿಸಿದ್ದೇವೆ ಎಂದವರು ಸಮಜಾಯಿಶಿ ನೀಡಿದರು.
ಇದೇ ಸಂದರ್ಭ ಮುಖ್ಯಮಂತ್ರಿ ಅವರು ಉಡುಪಿ ಜಿಲ್ಲೆಯಲ್ಲಿ 34.66 ಕೋಟಿ ರು.ಗಳ ಯೋಜನೆಗಳನ್ನು ಉದ್ಘಾಟಿಸಿದರು.ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿದರು.