Home » ಮಿತ್ರ-ಶತ್ರು
 

ಮಿತ್ರ-ಶತ್ರು

by Kundapur Xpress
Spread the love

ನಮ್ಮ ನಿಜವಾದ ಮಿತ್ರರು ಯಾರು? ನಿಜವಾದ ಶತ್ರುಗಳು ಯಾರು? ಇದನ್ನು ಪತ್ತೆ ಹಚ್ಚುವುದು ಬಲುಕಷ್ಟ! ನಿಜವಾದ ಮಿತ್ರರೆಂದು ನಾವು ಯಾರನ್ನು ತಿಳಿಯುವೆವೋ ಅವರ ಹೃದಯದ ಬಳಿ ಒಮ್ಮೆ ನಮ್ಮ ಕಿವಿಯನ್ನು ಕೊಂಡೊಯ್ದು ಸೂಕ್ಷ್ಮವಾಗಿ ಆಲಿಸಿದರೆ ಅಲ್ಲಿ ಕತ್ತಿಮಸೆಯುವ ಶಬ್ದ ಕೇಳಿ ಬರುತ್ತಿರುತ್ತದೆ. ನಿಜವಾದ ಶತ್ರುಗಳೆಂದು ನಾವು ಯಾರನ್ನು ತಿಳಿಯುವೆವೋ ಅವರಲ್ಲಿ ನಮ್ಮ ಒಳ್ಳೆಯತನದ ಬಗ್ಗೆ ಒಳಗೊಳಗೇ ಭಯವಿರುತ್ತದೆ. ಆದರೆ ವಾಸ್ತವದಲ್ಲಿ ನಮಗೆ ಹೊರಗಿನಿಂದ ಯಾರೂ ಶತ್ರುಗಳಿಲ್ಲ; ಮಿತ್ರರೂ ಇಲ್ಲ, ಅವರಿಬ್ಬರೂ ಇರುವುದು ನಮ್ಮ ಒಳಗೇ. ನಮ್ಮ ಪಂಚೇಂದ್ರಿಯಗಳೇ ನಮ್ಮ ಅಘೋಷಿತ ಶತ್ರುಗಳು. ನಮ್ಮ ಜೀವಾತ್ಮನೇ ನಮ್ಮ ಪರಮ ಮಿತ್ರ. ಆದರೆ ಈ ಮಿತ್ರ ಹಾಗೂ ಶತ್ರುವಿನ ಬಗ್ಗೆ ನಮ್ಮ ತಿಳಿವಳಿಕೆ ಮಾತ್ರ ಅದಲು ಬದಲಾಗಿದೆ. ವಾಸ್ತವದಲ್ಲಿ ನಮ್ಮ ಶತ್ರುಗಳೇ ಆಗಿರುವ ನಮ್ಮ ಪಂಚೇಂದ್ರಿಯಗಳನ್ನು ನಾವು ನಮ್ಮ ನಿಜವಾದ ಮಿತ್ರರೆಂಬಂತೆ ಪ್ರೀತಿಸುತ್ತೇವೆ, ಪೋಷಿಸುತ್ತೇವೆ. ಅವುಗಳ ಮೋಡಿಗೆ ಒಳಗಾಗುತ್ತೇವೆ. ಕೊನೆಗೆ ಅವುಗಳು ಆಜ್ಞಾಪಿಸಿ ದಂತೆ ಅವುಗಳ ಅಡಿಯಾಳಾಗಿ ಬದುಕುತ್ತೇವೆ. ನಮ್ಮ ಸ್ವಾತಂತ್ರ‍್ಯವನ್ನು ಸಂಪೂರ್ಣವಾಗಿ ಕಳೆದುಕೊಂಡು ಇಲ್ಲದ ಕಷ್ಟನಷ್ಟ, ದುಃಖ-ದುಮ್ಮಾನಗಳಿಗೆ ಗುರಿಯಾಗುತ್ತೇವೆ. ಬದುಕಿನಲ್ಲಿ ಕೂಡ ಹೀಗೆಯೇ. ನಾವು ಶತ್ರುಗಳಿಂದ ಪಡುವ ಪಾಡಿಗಿಂತಲೂ ಮಿತ್ರರಿಂದ ಪಡುವೇ ಪಾಡೇ ಹೇಳತೀರದು. ಸ್ನೇಹದ ಹೆಸರಿನಲ್ಲಿ ನಡೆಯುವ ವಿಶ್ವಾಸಘಾತುಕತನ, ಮೋಸ, ವಂಚನೆ, ಕಪಟಗಳನ್ನು ಅನುಭವಿಸಿರುವ ಮಿತ್ರರ ಸಂಖ್ಯೆ ಅಗಣಿತ. ಪಂಚೇಂದ್ರಿಯಗಳೆಂಬ ಶತ್ರುಗಳನ್ನು ಮಿತ್ರರೆಂದು ತಪ್ಪಾಗಿ ತಿಳಿದು ಅವುಗಳಿಂದ ಬದುಕಿನುದ್ದಕ್ಕೂ ಮೋಸ ಹೋಗುವ ನಾವು ನಮ್ಮ ನಿಜ ವಾದ ಮಿತ್ರನಾದ ಜೀವಾತ್ಮನನ್ನು ಯಥಾರ್ಥವಾಗಿ ಗುರುತಿಸುವಲ್ಲಿ ವಿಫಲರಾಗುತ್ತೇವೆ. ಬದುಕಿನಲ್ಲಿ ನಮಗೆ ಶಾಂತಿ, ಸಮಾಧಾನ, ನೆಮ್ಮದಿ ದುರ್ಲಭವಾಗಿರಲು ಕಾರಣವೇ ಇದು. ಶತ್ರುಗಳನ್ನು ಮಿತ್ರರೆಂದೂ ಮಿತ್ರರನ್ನು ಶತ್ರುಗಳೆಂದೂ ತಪ್ಪಾಗಿ ಭಾವಿಸಿ ನಿರಂತರ ದುಃಖಕ್ಕೆ ನಾವು ಗುರಿಯಾಗುವುದೇ ನಮ್ಮ ಅಜ್ಞಾನದ ಫಲವಾಗಿದೆ.

   

Related Articles

error: Content is protected !!