ಇಂಗ್ಲಿಷಿನಲ್ಲಿ ಒಂದು ಮಾತಿದೆ: ಎ ಫ್ರೆಂಡ್ ಇನ್ ನೀಡ್ ಈಸ್ ಎ ಫ್ರೆಂಡ್ ಇನ್ ಡೀಡ್. ಅಗತ್ಯಕ್ಕೆ ಅಥವಾ ತುರ್ತಿಗೆ ನೆರವಾಗುವವನೇ ನಿಜವಾದ ಸ್ನೇಹಿತ! ಆದರೆ ನಮ್ಮ ಅಗತ್ಯಗಳು ಎಂತಹವು? ಅವು ಕೇವಲ ಐಹಿಕವಾಗಿರುವಷ್ಟು ಕಾಲ ಸ್ವಾರ್ಥಪರವಾಗಿಯೇ ಇರುತ್ತವೆ. ಬಾಹ್ಯ ಜಗತ್ತಿನ ಸುಖ-ಸಾಧನಗಳನ್ನು ನೆಚ್ಚಿಕೊಳ್ಳುತ್ತಾ ಹಣದ ಬಲದಿಂದಲೇ ಆನಂದದ ಬದುಕು ಪ್ರಾಪ್ತವಾಗುವುದೆಂಬ ಭ್ರಮೆಯಲ್ಲಿ ನಾವಿರುವುದರಿಂದ ನಮ್ಮೆಲ್ಲ ವ್ಯವಹಾರಗಳನ್ನು ನಾವು ಬಹಳ ಲೆಕ್ಕಾಚಾರದಿಂದ ಕೈಗೊಳ್ಳುತ್ತೇವೆ. ನಮಗೆ ಇತರರಿಂದ ಆಗುವ ಉಪಕಾರ, ಲಾಭಗಳನ್ನು ನಾವು ಹಣದ ಮೂಲಕವೇ ಲೆಕ್ಕ ಹಾಕುವುದರಿಂದ ವ್ಯಕ್ತಿ ಸಂಬಂಧಗಳಲ್ಲಿ ತಾರತಮ್ಯವನ್ನು ಕಾಣುತ್ತೇವೆ. ನಮಗೆ ಯಾರು ಹೆಚ್ಚು ಪ್ರಯೋಜನಕಾರಿ, ಯಾರಿಂದ ಹೆಚ್ಚು ಲಾಭ, ಯಾರು ನಮ್ಮನ್ನೇ ನೆಚ್ಚಿಕೊಂಡು ನಮಗೆ ನಷ್ಟ ಎಂಬಿತ್ಯಾದಿಯಾಗಿ ನಾವು ಲೆಕ್ಕ ಹಾಕುವುದರಿಂದ ನಮ್ಮ ಸಂಬಂಧಗಳೆಲ್ಲವೂ ‘ಅಗತ್ಯಾಧಾರಿತ ವಾಗಿವೆ. ಆದುದರಿಂದಲೇ ನಮ್ಮ ಅನುಕೂಲಕ್ಕೆ ತಕ್ಕಂತೆ ನಾವು ಇತರರ ವ್ಯಕ್ತಿತ್ವ, ಗುಣನಡತೆ, ಲೋಪದೋಷಗಳನ್ನು ಕ್ಷಣಮಾತ್ರದಲ್ಲಿ ತೀರ್ಮಾನಿಸುತ್ತೇವೆ. ನಮ್ಮನ್ನು ಮಾತ್ರ ಸ್ವವಿಮರ್ಶೆಗೆ ಗುರಿಪಡಿಸುವುದಿಲ್ಲ. ಏಕೆಂದರೆ ನಾವು ನಮ್ಮೊಳಗಿನ ಜೀವಾತ್ಮನನ್ನು ನಮ್ಮ ಮಿತ್ರನನ್ನಾಗಿ ಪರಿಗಣಿಸಿರುವುದೇ ಇಲ್ಲ ! ಹಾಗಾಗಿ ಇತರರು ನಮಗೆ ಪರಿಚಿತರಿರುವಷ್ಟು ನಮಗೆ ನಾವೇ ಪರಿಚಿತರಿರುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ನಮ್ಮೊಳಗಿನಿಂದ ವಿಭಿನ್ನ ಬಗೆಯ ಅಸಹಜ ವ್ಯಕ್ತಿಗಳು ದಿಢೀರನೆ ಮೇಲೆದ್ದು ಬರುವುದನ್ನು ನಾವು ವ್ಯಾವಹಾರಿಕ ಬದುಕಿನಲ್ಲಿ ಕಾಣುತ್ತಿರುತ್ತೇವೆ. ಮಾತ್ರವಲ್ಲ ಸೋಜಿಗವನ್ನೂ ಪಡುತ್ತೇವೆ. ಇದಕ್ಕೆ ಕಾರಣ ನಮ್ಮ ನಿಜವಾದ ಪರಮ ಮಿತ್ರನಾದ ಜೀವಾತ್ಮನನ್ನು ನಾವು ಮೆಟ್ಟಿ ನಿಂತಿರುವುದಲ್ಲದೆ ಆತನನ್ನು ನಮ್ಮ ಶತ್ರುವೆಂದು ನಾವು ಭ್ರಮಿಸಿರುವುದೇ ಜೀವಾತ್ಮನಿಗೆ ಯಾವ ರಾಗದ್ವೇಷಗಳ ಲೇಪವೂ ಇಲ್ಲ: ಸುಖ ಭೋಗಗಳ ಹಂಬಲವೂ ಇಲ್ಲ. ಆತ ನಿರ್ಲಿಪ್ತ ಪ್ರಶಾಂತ. ಸಚ್ಚಿದಾನಂದ ಸ್ವರೂಪಿ ಪರಮಾತ್ಮನ ಅಂಶವೇ ಆಗಿರುವನು. ಆದುದರಿಂದ ಪರಮಾತ್ಮನನ್ನು ಸೇರುವುದೇ ಆತನ ಗುರಿಯಾಗಿದೆ