ಉಡುಪಿ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಸಭೆ ಸಮಾರಂಭ ಸೇರಿದಂತೆ ಮತ್ತಿತರ ಚಟುವಟಿಕೆಗಳನ್ನು ನಡೆಸಲು ಸುವಿಧಾ ತಂತ್ರಾಂಶದ ಮೂಲಕ ಅನುಮತಿ ಪಡೆಯಬೇಕೆಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ .ಕೆ ರವರು ತಿಳಿಸಿದರು .
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಹಾಗೂ ಪ್ರಿಂಟರ್ ಮತ್ತು ಪಬ್ಲಿಷರ್ಸ್ ಗಳ ಮಾಲೀಕರರೂಂದಿಗೆ ಸಭೆ ನಡೆಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಸಾರ್ವಜನಿಕ ಸಭೆ, ಸಮಾರಂಭ, ರ್ಯಾಲಿ ನಡೆಸಲು, ಸಂಚಾರಿ ವಾಹನ, ಧ್ವನಿವರ್ಧಕ, ಹೆಲಿಕಾಪ್ಟರ್ ಹಾಗೂ ಹೆಲಿಪ್ಯಾಡ್ ಅನುಮತಿ ಸೇರಿದಂತೆ ಇನ್ನಿತರೆ ಕಾರ್ಯ ಚಟುವಟಿಕೆಗಳಿಗೆ ಸುವಿಧಾ ತಂತ್ರಾಂಶ ಮೂಲಕವೇ ಅನುಮತಿ ಪಡೆಯಬೇಕೆಂದರು.
ಲೋಕಸಭೆ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆಯನ್ನು ಚುನಾವಣಾ ಆಯೋಗ ಘೋಷಿಸಿದ್ದು , ಆಯೋಗ ಜಾರಿಗೊಳಿಸಿರುವ ನೀತಿ ಸಂಹಿತೆಗಳನ್ನು ರಾಜಕೀಯ ಪಕ್ಷಗಳು ತಪ್ಪದೇ ಪಾಲಿಸ ಬೇಕೆಂದರು.
ಪ್ರಚಾರ ಕಾರ್ಯಕ್ಕೆ ಯಾವುದೇ ಧಾರ್ಮಿಕ ಸಂಸ್ಥೆ, ಸ್ಥಳಗಳನ್ನು ಬಳಸುವಂತಿಲ್ಲ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಬಾರದು. ಮದುವೆ, ಸಭೆ – ಸಮಾರಂಭಗಳಲ್ಲಿ ಮತ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಿದರು.
ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ನಿಷ್ಪಕ್ಷಪಾತ, ನ್ಯಾಯಸಮ್ಮತವಾಗಿ ನಡೆಸಲು ಚುನಾವಣೆ ಆಯೋಗದ ನಿರ್ದೇಶನದ ಅನ್ವಯ ಕಾರ್ಯಚಟುವಟಿಕೆಗಳನ್ನು ನಡೆಸಿ ಜಿಲ್ಲಾಡಳಿತಕ್ಕೆ ಯಶಸ್ವಿ ಚುನಾವಣೆ ನಡೆಸಲು ಎಲ್ಲ ಪಕ್ಷದವರು ಸಹಕಾರಿಸಬೇಕೆಂದರು.
ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಕರಪತ್ರಗಳನ್ನು ಮುದ್ರಿಸುವುದು, ಜಾಹೀರಾತುಗಳನ್ನು ಪ್ರಚಾರ ಪಡಿಸುವುದು ಮಾಡಿದ್ದಲ್ಲಿ ಅಂತಹವರ ಮೇಲೆ ಆರ್.ಪಿ ಕಾಯ್ದೆಯಡಿಯಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್,ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ .ಬಿ ಶಿಕ್ಷಣಾಧಿಕಾರಿ ಅಶೋಕ್ ಕಾಮತ್. ವಿವಿಧ ರಾಜಕೀಯ ಪಕ್ಷಗಳ ಮುಖಂಡರು , ಪ್ರಿಂಟಿಂಗ್ ಪ್ರೆಸ್ ಮಾಲೀಕರುಮತ್ತು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು