ಶಿವಮೊಗ್ಗ : ಪುತ್ರ ಕೆ.ಇ.ಕಾಂತೇಶ್‌ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನ ಗೊಂಡು ಬಂಡಾಯದ ಬಾವುಟ ಹಾರಿಸಿರುವ ಈಶ್ವರಪ್ಪ ಅವರ ಕೋಪ ಶಮನಕ್ಕೆ ಬಿಜೆಪಿ ವರಿಷ್ಠರು ನಡೆಸಿದ ಸಂಧಾನ ಮಾತುಕತೆ ಮುರಿದು ಬಿದ್ದಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯ ದರ್ಶಿ ರಾಧಾಮೋಹನ್ ಅಗರ್‌ವಾಲ್ ಹಾಗೂ ರಾಜ್ಯ ನಾಯಕರು ಭಾನುವಾರ ಈಶ್ವರಪ್ಪ ಮನೆಗೆ ಭೇಟಿ ನೀಡಿ ಮನವೊಲಿಕೆಗೆ ಯತ್ನಿಸಿದರಾದರೂ, ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ತಮ್ಮ ಪಟ್ಟು ಸಡಿಲಿಸಲಿಲ್ಲ. ಇದರಿಂದಾಗಿ ವರಿಷ್ಠರು ಬರಿಗೈಯಲ್ಲಿ ವಾಪಸ್ ತೆರಳಿದರು.
ಭಾನುವಾರ ಬೆಳಗ್ಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ತು ಸದಸ್ಯ ರವಿ ಕುಮಾರ್, ಡಿ.ಎಸ್.ಅರಣ್ ಹಾಗೂ ಇತರ ನಾಯಕರು ಶಿವಮೊಗ್ಗದ ಮಲ್ಲೇಶ್ವರ ನಗರದ ಈಶ್ವರಪ್ಪ ಮನೆಗೆ ಭೇಟಿ ನೀಡಿ, ಅವರ ಮನವೂ ಲಿಸುವ ಪ್ರಯತ್ನ ಮಾಡಿದರು. ಸೋಮವಾರ ನಡೆಯುವ ಮೋದಿ ಕಾರ್ಯಕ್ರಮಕ್ಕೆ ಆಗ ಮಿಸುವಂತೆ ಆಹ್ವಾನ ನೀಡಿದರು.