ಶಿವಮೊಗ್ಗ : ಕಾಂಗ್ರೆಸ್ ಪಕ್ಷದ ಸಂಸ್ಕೃತಿ ರಾಜ್ಯದಲ್ಲಿ ಬಿಜೆಪಿಗೂ ಬಂದಿದೆ. ಯಾರ್ ಯಾರೋ ಪಕ್ಷದ ಟಿಕೆಟ್ ತೆಗೆದುಕೊಂಡು ಬರುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿ ಮೋದಿಯವರು ಕುಟುಂಬ ರಾಜಕಾರಣದ ವಿರುದ್ಧ ಇದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ಚುನಾವಣೆಗೆ ಸ್ಪರ್ಧಿಸಬೇಡಿ ಅಂದರು. ಅದಕ್ಕೊಪ್ಪಿ ಸ್ಪರ್ಧೆಯಿಂದ ಹಿಂದೆ ಸರಿದೆ. ಆದರೆ, ಯಡಿಯೂರಪ್ಪ ಕುಟುಂಬದಲ್ಲಿ ಒಬ್ಬ ಸಂಸದ ಇದ್ದಾಗ್ಯೂ ಅವರ ಮತ್ತೊಬ್ಬ ಮಗನಿಗೆ ಶಾಸಕ ಸ್ಥಾನ ಕೊಡಿಸಿದರು. ಇದಾದ ಬಳಿಕ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಿದರು ಎಂದರು.
ಈ ಹಿಂದೆ ಪಕ್ಷ ಏನೇ ತೀರ್ಮಾನ ಮಾಡುವುದಾದರೂ ಕೋರ್ಕಮಿಟಿ ಸಭೆ ಮಾಡುತ್ತಿದ್ದೆವು. ರಾಜ್ಯ ಸಮಿತಿ ಕೊಟ್ಟ ಪಟ್ಟಿಗೆ ಕೇಂದ್ರ ಸಮಿತಿ ಸಹಿ ಮಾಡುತ್ತಿತ್ತು. ‘ಈಗ ಆ ಸಂಸ್ಕೃತಿ ಇಲ್ಲದಂತೆ ಯಡಿಯೂರಪ್ಪ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಟಿಕೆಟ್ ತೀರ್ಮಾನ ಆಗುವ ಮುನ್ನವೇ ಯಡಿಯೂರಪ್ಪ ಚಿಕ್ಕಮಗಳೂರಿಗೆ ಹೋದಾಗ ಶೋಭಾರನ್ನು ನಿಲ್ಲಿಸುತ್ತೇವೆ, ಗೆಲ್ಲಿಸಬೇಕು ಅಂದರು. ಚಿಕ್ಕಮಗಳೂರಿನಲ್ಲಿ ಕಾರ್ಯ ಕರ್ತರು ಗೋಬ್ಯಾಕ್ ಶೋಭಾ ಎಂದಿದ್ದಕ್ಕೆ ಆಕೆಯ ಪರವಾಗಿ ನಿಂತು ಬೇರೆ ಕ್ಷೇತ್ರದಲ್ಲಿ ಅವರಿಗೆ ಟಿಕೆಟ್ ಕೊಡಿಸಿದರು. ಆದರೆ ಪ್ರತಾಪ್ ಸಿಂಹ, ಸಿ.ಟಿ.ರವಿಗೆ ಯಾಕೆ ಬೇರೆ ಕ್ಷೇತ್ರ ಕೊಡಿಸಲಿಲ್ಲ? ಕೋರ್ ಕಮಿಟಿಯ 114 ಮಂದಿಯಲ್ಲಿ 84 ಮಂದಿ ಪ್ರತಾಪ್ಗೆ ಟಿಕೆಟ್ ನೀಡಬೇಕು ಎಂದರೂ ತಪ್ಪಿಸಲಾಯಿತು. ಯಡಿಯೂರಪ್ಪನವರಿಗೆ ತನ್ನ ಕುಟುಂಬ ಹಾಗೂ ಹಿಂಬಾಲಕರೇ ಮುಖ್ಯವಾದರೆಂದು ಆರೋಪಿಸಿದರು.