ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಸಣ್ಣ ಕಥೆ ಎಂಬುವುದು ಹೊರಗಿನಿಂದ ಆಮದಾಗಿ ಬಂದ ಪ್ರಕಾರವಾಗಿದ್ದರೂ ಪ್ರಾಚೀನ ಕಥನದ ಮಾದರಿಯನ್ನು ಒಳಗೊಂಡು ಬೆಳೆದಿದೆ. ಸಣ್ಣ ಕಥೆ ಎಂಬುವುದು ಮನುಷ್ಯನ ಜೀವನವನ್ನು ಆಧರಿಸಿ ಕಲ್ಪಿತವಾಗಿರುವ ನಿರೂಪಣೆ. ಅಲ್ಲಿ ಓದುಗ ಹಾಗೂ ಚಿತ್ರಿತವಾಗಿರುವ ವಸ್ತುವಿನ ನಡುವೆ ಸಂಬಂಧ ಏರ್ಪಡುತ್ತಿರುತ್ತದೆ. ನಮ್ಮ ಬದುಕೇ ಒಂದು ಕಥೆ. ಸರಾಗವಾಗಿ ಹರಿಯುವ ಮನಸ್ಸಿನ ಭಾವನೆಗಳಿಗೆ ಒಂದು ಸುಂದರವಾದ ಚೌಕಟ್ಟು ಹಾಕಿ ಸ್ವೀಕಾರ ಯೋಗ್ಯವಾದ ಜೀವನ ಮೌಲ್ಯಗಳನ್ನು ತುಂಬಿ ಜನ ಜೀವನವನ್ನು ವಿಶ್ಲೇಷಣೆಯೊಂದಿಗೆ ವಿಮರ್ಶೆ ಮಾಡುವ ಕಾಳಜಿ ಸಣ್ಣ ಕಥೆಗಳಲ್ಲಿ ಸಾಧ್ಯವಾಗುತ್ತದೆ ಎಂದು ಮೂಡಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಹರೀಶ್ ಟಿ.ಜಿ.ಯವರು ಹೇಳಿದರು.
ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿನ ಕನ್ನಡ ಸಂಘ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದೊಂದಿಗೆ ನಡೆದ ವಿದ್ಯಾರ್ಥಿ ಕಥಾಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕರವರು ವಿದ್ಯಾರ್ಥಿಗಳು ಪಠ್ಯದೊಂದಿಗೆ ಇಂತಹ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಭಾರತೀಯ ಸಂಸ್ಕೃತಿ, ಮಾನವೀಯ ಮೌಲ್ಯಗಳ ಸಹಜವಾದ ನಿರೂಪಣೆಯೊಂದಿಗೆ ಕಲಾತ್ಮಕವಾಗಿರುವ ಸಣ್ಣ ಕಥೆಗಳಲ್ಲಿ ಸುಧಾರಣಾವಾದಿ ಜೀವನ ಕ್ರಮಗಳಿರುತ್ತವೆ. ವಿದ್ಯಾರ್ಥಿಗಳು ಇಂತಹ ಕಥೆಗಳನ್ನು ಓದಿನೊಂದಿಗೆ ವಿಮರ್ಶಾತ್ಮಕವಾಗಿ ನೋಡಿ ಬದುಕಿನ ಎಲ್ಲ ಅನುಭವಗಳಿಗೆ ಮುಕ್ತವಾಗಿ ತೆರೆದುಕೊಳ್ಳುವ ಮನಸ್ಥಿತಿ ಹೊಂದಬೇಕಾಗಿದೆ ಎಂದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀ ರಾಮರಾಯ ಆಚಾರ್ಯ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ಶ್ರೀ ನಾಗರಾಜ ಯು. ಶುಭ ಹಾರೈಸಿದರು.
ಆಧುನಿಕ ಕನ್ನಡ ಸಾಹಿತ್ಯದ ಪ್ರಾತಿನಿಧಿಕ ಕಥೆಗಳಾದ ಮಾಸ್ತಿಯವರ ಮೊಸರಿನ ಮಂಗಮ್ಮ ಕಥೆಯ ಬಗ್ಗೆ ಪವಿತ್ರ ಮರಾಠಿ, ಕುವೆಂಪುರವರ ಧನ್ವಂತರಿ ಚಿಕಿತ್ಸೆ ಕಥೆಯ ಬಗ್ಗೆ ಅನುಷಾ ಪೂಜಾರಿ, ನಿರಂಜನರ ಕೊನೆಯ ಗಿರಾಕಿ ಕಥೆಯ ಬಗ್ಗೆ ಪ್ರತಿಮಾ, ದೇವನೂರು ಮಹಾದೇವರ ಅಮಾಸ ಕಥೆಯ ಬಗ್ಗೆ ಅಮಿತಾ, ಜಯಂತ ಕಾಯ್ಕಿಣಿಯವರ ಅಮೃತ ಬಳ್ಳಿ ಕಷಾಯ ಕಥೆಯ ಬಗ್ಗೆ ಅನನ್ಯ, ಗಂಗಾ ಪಾದೇಕಲ್‌ರವರ ಪುಲಪೇಡಿ ಕಥೆಯ ಬಗ್ಗೆ ದಿವ್ಯಶ್ರೀ ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು. ಕನ್ನಡ ಸಂಘದ ಸಂಚಾಲಕರಾದ ಶ್ರೀ ನಾಗರಾಜ ವೈದ್ಯ ಎಂ., ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಸ್ವಾತಿ ತೃತೀಯ ಬಿ.ಎಸ್ಸಿ. ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕಿ ಪ್ರೇಮಲಾಕ್ಷಿ ಕೆ.ಬಿ. ವಂದಿಸಿದರು.