ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವಂತೆ ಆಹ್ವಾನಿಸಿದ್ದಾರೆ.
ಶುಕ್ರವಾರ ಜೆ.ಪಿ.ನಗರದಲ್ಲಿರುವ ಸುಮಲತಾ ಅವರ ನಿವಾಸಕ್ಕೆ ತೆರಳಿದ ವಿಜಯೇಂದ್ರ ಅವರು ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಪಕ್ಷಕ್ಕೆ ಆಹ್ವಾನ ನೀಡಿದರು.
ಆದರೆ, ಈ ಬಗ್ಗೆ ತಕ್ಷಣ ತಮ್ಮ ನಿಲುವು ವ್ಯಕ್ತಪಡಿಸದ ಸುಮಲತಾ, ಶನಿವಾರ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ಬಳಿಕ ಮಂಡ್ಯದಲ್ಲೇ ಮುಂದಿನ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು. ಮಂಡ್ಯ ಸಂಸದರಾಗಿರುವ ಸುಮಲತಾ ಅವರನ್ನು ಭೇಟಿಯಾಗಿ ಮಾತಾಡಬೇಕಾಗಿದ್ದು ರಾಜ್ಯಾಧ್ಯಕ್ಷನಾಗಿ ನನ್ನ ಕರ್ತವ್ಯ. ಬದಲಾದ ರಾಜಕೀಯ ಸ್ಥಿತಿಯಲ್ಲಿ ಇವತ್ತು ಸಾಕಷ್ಟು ಬದಲಾವಣೆ ಆಗಿದೆ. ಸುಮಲತಾ ಅವರ ಜೊತೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಸುಮಲತಾ ಅವರು ಕೂಡ ಇದಕ್ಕೆ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.