Home » ಅಭಿವೃದ್ಧಿ ವಿಷಯದಲ್ಲಿ ಚರ್ಚೆಗೆ ಮಾಜಿ ಶಾಸಕರಿಗೆ ಪಂಥಾಹ್ವಾನ
 

ಅಭಿವೃದ್ಧಿ ವಿಷಯದಲ್ಲಿ ಚರ್ಚೆಗೆ ಮಾಜಿ ಶಾಸಕರಿಗೆ ಪಂಥಾಹ್ವಾನ

ದೀಪಕ್ ಕುಮಾರ್ ಶೆಟ್ಟಿ

by Kundapur Xpress
Spread the love

ಬೈಂದೂರು : ಅಭಿವೃದ್ಧಿ ಹಾಗೂ ಅನುದಾನ ಹಂಚಿಕೆ ವಿಚಾರದಲ್ಲಿ ಬಿ.ವೈ. ರಾಘವೇಂದ್ರ ಅವರು ಯಾವುದೇ ತಾರತಮ್ಯ ಮಾಡಿಲ್ಲ. ಕ್ಷೇತ್ರದಾದ್ಯಂತ ಪಾದರಸದಂತೆ ಸಂಚರಿಸಿ ಹಳ್ಳಿ ಹಳ್ಳಿಗಳಲ್ಲೂ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ನೆರವಾಗಿದ್ದಾರೆ. ಹಲವು ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಐದು ವರ್ಷಕ್ಕೊಮ್ಮೆ ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುವುದಕ್ಕೆ ಸೀಮಿತರಾಗಿದ್ದಾರೆ ಎಂದು ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬೈಂದೂರಿನ ಅಂಬಿಕಾ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ದೇವಾಡಿಗರ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಮಂಜೂರು ಮಾಡಿದ್ದರು ನಂತರ ಬಂದ ಕಾಂಗ್ರೆಸ್ ಸರಕಾರ ಆ ಅನುದಾನವನ್ನು ಬಿಡುಗಡೆ ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಹಾಗಾದರೆ ಈ ವಿಷಯದಲ್ಲಿ ಮಾಜಿ ಶಾಸಕರಾದ ಗೋಪಾಲ್ ಪೂಜಾರಿ ಅವರಿಗೆ ಬದ್ಧತೆ ಇಲ್ಲವೇ? ತಮ್ಮ ಸರ್ಕಾರದಿಂದ ದೇವಾಡಿಗರ ಸಮುದಾಯ ಭವನಕ್ಕೆ ಒಂದು ಕೋಟಿ ಬರಬೇಕಾದದ್ದನ್ನು ತರಿಸಿ ಕೊಡಬಹುದಿತ್ತಲ್ಲವೇ ಎಂದು ಹರಿಹಾಯ್ದರು‌.
ಅಭಿವೃದ್ಧಿ ವಿಷಯದಲ್ಲಿ ಸದಾ ಚರ್ಚೆಗೆ ಸಿದ್ದರಿದ್ದೇವೆ. ಬಿ ವೈ ರಾಘವೇಂದ್ರ ಅವರು ಸಂಸದರಾದ ಅನಾಥರದಲ್ಲಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಮತ್ತು ನಿಮ್ಮ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿಯ ಪಟ್ಟಿ ತನ್ನಿ ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ಕಾಂಗ್ರೆಸ್ ಗೆ ಪಂಥಾಹ್ವಾನ ನೀಡಿದರು.
ಗಂಗೊಳ್ಳಿ ಬಂದರು, ಮರವಂತೆ ಹೊರ ಬಂದರು, ಕೊಡೇರಿ ಕಿರು ಬಂದರು, ಅಳ್ವೇಗೆದ್ದೆ ಬಂದರು ಹೀಗೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮೀನುಗಾರ ಸಮುದಾಯಕ್ಕೆ ಅನೇಕ ರೀತಿಯಲ್ಲಿ ಅನುಕೂಲ ಮಾಡಿದ್ದರು. ಕ್ಷೇತ್ರದಲ್ಲಿ ಪ್ರವಾಸೋದ್ಯಮ ವಲಯದ ಅಭಿವೃದ್ಧಿಯಲ್ಲಿ ನಮ್ಮ ಸಂಸದರು ಮುಂದಿದ್ದಾರೆ. ಆ ಕಾರ್ಯವನ್ನು ಇದೀಗ ಶಾಸಕರಾದ ಗುರುರಾಜ ಗಂಟೆಹೊಳೆಯವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದರು.

ಸಮರ್ಥ ನಾಯಕತ್ವ
ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ಹಾಗೂ ಸಂಸದರಾದ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಹತ್ತು ವರ್ಷದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾರ್ಯಗಳು ನಡೆದಿವೆ.
ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು, ಗ್ರಾಮ ಪಂಚಾಯಿತಿಯ ತೀರ ಹಳ್ಳಿ ಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ಮರವಂತೆ, ಕೊಡೇರಿ ಹಾಗೂ ಶಿರೂರು ಅಳ್ವೇಗದ್ದೆಯಲ್ಲಿ ಬಂದರು ನಿರ್ಮಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆ ಜೊತೆಗೆ ಕ್ಷೇತ್ರದಲ್ಲಿ ಬರುವ ಎಲ್ಲ ಸಮುದಾಯಗಳ ಅಭಿವೃದ್ಧಿಗೂ ಕ್ರಮ ವಹಿಸಲಾಗಿದೆ. ಸಮುದಾಯ ಭವನಗಳ ನಿರ್ಮಾಣ, ದೇವಸ್ಥಾನಗಳಲ್ಲಿ ಸಭಾಂಗಣ ನಿರ್ಮಾಣ ಕಾಮಗಾರಿಗೆ ವಿಶೇಷ ಅನುದಾನ ಒದಗಿಸಲಾಗಿದೆ.
ವಿವಿಧ ಸಮುದಾಯ ಭವನಕ್ಕೆ ಅನುದಾನ
ಖಾರ್ವಿ ಸಮುದಾಯ ಭವನ, ಕೊಂಕಣ ಖಾರ್ವಿ ಸಮುದಾಯ ಭವನ ಮರಾಠಿ ಸಮುದಾಯ ಭವನ, ಕೊಠಾರಿ ಸಮುದಾಯ ಭವನ, ಮೇಸ್ತ ಸಮಾಜದ ಸಮುದಾಯ ಭವನ ಭೋವಿ ಸಮುದಾಯ ಭವನ ಹೀಗೆ ಹಲವು ಸಮುದಾಯಗಳ ಸಮುದಾಯ ಭವನಕ್ಕೆ 20 ಕೋಟಿ ರೂಗಳಿಗೂ ಅಧಿಕ ಅನುದಾನವನ್ನು ಕಳೆದ 10 ವರ್ಷದಲ್ಲಿ ನೀಡಲಾಗಿದೆ ಎಂದರು.
ಡುಬ್ಲಿಕೆಟ್ ಯಾರೆಂದು ತಿಳಿಯಲಿದೆ
ಲೋಕಸಭಾ ಚುನಾವಣೆಗೆ ನಮ್ಮ ಪಕ್ಷದಲ್ಲಿ ಸಂಘಟನಾತ್ಮಕ ಪ್ರಯತ್ನ ನಡೆಯುತ್ತಿದೆ. ಶಾಸಕರಾದ ಗುರುರಾಜ ಗಂಟಿಹೊಳೆ ಬೂತ್ ಕಡೆಗೆ ಸಮೃದ್ಧ ನಡಿಗೆ ಆರಂಭಿಸಿದ್ದಾರೆ. ಬೈಂದೂರಿನಿಂದ ಒಂದು ಲಕ್ಷಕ್ಕೂ ಅಧಿಕ ಲೀಡ್ ನಮ್ಮ ಅಭ್ಯರ್ಥಿಗೆ ನೀಡಲಿದ್ದೇವೆ. ಫಲಿತಾಂಶದ ನಂತರ ಯಾರು ನಿಜವಾದ ಡುಪ್ಲಿಕೇಟ್ ಎನ್ನುವುದು ಮಾಜಿ ಶಾಸಕ ಬಿ. ಎಂ.ಸುಕುಮಾರ್ ಶೆಟ್ಟಿ ಅವರಿಗೆ ತಿಳಿಯಲಿದೆ ಎಂದರು.

ದೇವಾಡಿಗರಿಗೆ ಅನ್ಯಾಯವಾಗಿಲ್ಲ
ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ಅವರು ಮಾತನಾಡಿ, 15 ವರ್ಷ ಶಾಸಕರಾಗಿ ಕೆಲಸ ಮಾಡಿದ್ದ ಗೋಪಾಲ ಪೂಜಾರಿಯವರು ಸಂಸದರ ಬಗ್ಗೆ ಮಾತನಾಡುವಾಗ ಯಾವ ರೀತಿ ಮಾತಾಡಬೇಕು ಎಂದು ಅರಿತಿರಬೇಕು ಮತ್ತು ಆಲೋಚನೆ ಮಾಡಿ ಮಾತನಾಡಬೇಕು. ದೇವಾಡಿಗರ ಸಮುದಾಯಕ್ಕೆ ಯಾವುದೇ ರೀತಿಯ ಅನ್ಯಾಯ ಆಗಿಲ್ಲ. ಸಮುದಾಯ ಭವನಕ್ಕೆ ಈ ಹಿಂದೆ ಒಂದು ಕೋಟಿ ರೂಪಾಯಿ ಸಂಸದರು ಬಿಡುಗಡೆ ಮಾಡಿದ್ದರು. ಸರ್ವೆ ನಂಬರ್ ನೀಡಲು ಆಗದೆ ಇದ್ದರಿಂದ ವಾಪಸ್ ಹೋಗಿತ್ತು. ನಂತರ ಇದೀಗ ಒಂದು ಕೋಟಿ ಬಿಡುಗಡೆ ಆದರೂ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅನುದಾನ ಕೊಡಲಿಲ್ಲ. ಸಂಸದರು ಆದೇಶ ಪ್ರತಿ ಕೊಟ್ಟಿದ್ದಾರೆ. ಯಾವುದು ಕಾಗದ ಕೊಟ್ಟಿದ್ದಲ್ಲ. ಕಾಗದಕ್ಕೂ ಆದೇಶದ ಪ್ರತಿಗೂ ವ್ಯತ್ಯಾಸ ಗೊತ್ತಿಲ್ಲದೆ ಮಾತನಾಡುವುದು ಮಾಜಿ ಶಾಸಕರು ಈ ಹಿಂದೆ ಮಾಡಿದ ಕಾರ್ಯವನ್ನು ತೋರಿಸುತ್ತದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಪದಾಧಿಕಾರಿಗಳಾದ ಸದಾನಂದ ಉಪ್ಪಿನಕುದ್ರು, ಅಶೋಕ್ ದೇವಾಡಿಗ, ರಾಜಶೇಖರ್ ದೇವಾಡಿಗ, ಕೃಷ್ಣದೇವಾಡಿಗ, ಗಣೇಶ ಗಾಣಿಗ ಉಪಸ್ಥಿತರಿದ್ದರು

   

Related Articles

error: Content is protected !!