ಬೆಂಗಳೂರು : ರಾಜ್ಯ ಸರ್ಕಾರ ಸುಭದ್ರವಾಗಿದೆ. ಆದರೆ, ದಿವಾಳಿಯಾಗಿರುವುದು ಬಿಜೆಪಿ ನಾಯಕರ ಬುದ್ದಿ. ದಿನಕ್ಕೊಂದು ಸುಳ್ಳು ಹೇಳುತ್ತಾ. ಆ ಸುಳ್ಳು ಬಯಾಲಾದಾಗ ಅದನ್ನು ಸಮರ್ಥಿಸಲು ಇನ್ನೊಂದಿಷ್ಟು ಸುಳ್ಳು ಸೃಷ್ಟಿಸಿ ತಮ್ಮನ್ನು ತಾವೇ ಬೆತ್ತಲೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ರಾಜ್ಯ ಸರ್ಕಾರದ ಬಳಿ ಹಣವಿಲ್ಲದೆ ರಾಜ್ಯದ ದಿವಾಳಿ ಯಾಗಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪತ್ರಿಕಾ ಹೇಳಿಕೆ ಮೂಲಕ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಕಳೆದ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 10 ಸಾವಿರ ಕೋಟಿ ರು. ಸಾಲ ಮಾಡಿದ್ದ ಕಾರಣಕ್ಕೆ ರಾಜ್ಯ ದಿವಾಳಿಯಾಗುತ್ತಿದೆ ಎಂದು ಬಿಜೆಪಿ ನಾಯಕರು ಬೊಬ್ಬಿಡುತ್ತಿದ್ದಾರೆ. ಆದರೆ, ಅವರ ಸರ್ಕಾರದ ಅವಧಿಯಲ್ಲಿ ಮಾಡಿದ ಸಾಲದ ಲೆಕ್ಕಪರಿಶೀಲಿಸುವ ಕಷ್ಟ ತೆಗೆದುಕೊಂಡಿದ್ದರೆ ನಮ್ಮ ಕೈಗೆ ಬಡಿಗೆ ಕೊಟ್ಟು ಹೊಡೆಸಿಕೊಳ್ಳುವ ಪರಿಸ್ಥಿತಿ ಬಿಜೆಪಿಗೆ ಬರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ