ಚಿಕ್ಕಮಗಳೂರು : ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೊಡುವ ಮತಗಳು ಅರಾಜಕತೆ, ದೇಶದ ಆರ್ಥಿಕ ದಿವಾಳಿತನ, ಭ್ರಷ್ಟಾಚಾರ, ಅಭದ್ರತೆ ಹಾಗೂ ಆಂತರಿಕ ಸುರಕ್ಷತೆಯ ಅಪಾಯಕ್ಕೆ ನಾಂದಿಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಧುರೀಣ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದರು.
ಚಿಕ್ಕಮಗಳೂರಿನಲ್ಲಿ ಗುರುವಾರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಬಿಎಸ್‌ವೈ ಮಾತನಾಡಿದರು. ಹಣ, ಅಧಿಕಾರ, ತೋಳ್ಳಲ, ಹೆಂಡದ ಬಲ, ಜಾತಿ ವಿಷಬೀಜ ಬಿತ್ತಿ ಓಟು ಪಡೆಯುವ ಕಾಲವಿತ್ತು. ಆದರೆ ಜನ ಇಂದು ಜಾಗೃತರಾಗಿದ್ದಾರೆ. ಸರಿ, ತಪ್ಪು ತಿಳಿದುಕೊಳ್ಳುವ ಶಕ್ತಿ ಅವರಿಗಿದೆ. ಕಾಂಗ್ರೆಸ್ಸಿಗರ ರಾಜಕೀಯ ದೊಂಬರಾಟವನ್ನು ನಂಬುವುದಿಲ್ಲ ಎಂದರು.
ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸುಮಾರು 3 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲು ಜನ ತೀರ್ಮಾನ ಮಾಡಿದ್ದಾರೆ. ಪರಿಷತ್ತಿನಲ್ಲಿ ಮಾತನಾಡುವಾಗ ಇಡೀ ಸದನ ಗಮನ ಹರಿಸುವಂತ ವ್ಯಕ್ತಿ ಕೋಟ ಶ್ರೀನಿವಾಸ ಪೂಜಾರಿ ಆಗಿದ್ದಾರೆ ಎಂದು ನುಡಿದರು