Home » ಪಕ್ಷಾಂತರವೇ ಜಯಪ್ರಕಾಶ್ ಹೆಗ್ಡೆ ಸಾಧನೆ : ಲಾಲಾಜಿ ಆರ್. ಮೆಂಡನ್
 

ಪಕ್ಷಾಂತರವೇ ಜಯಪ್ರಕಾಶ್ ಹೆಗ್ಡೆ ಸಾಧನೆ : ಲಾಲಾಜಿ ಆರ್. ಮೆಂಡನ್

by Kundapur Xpress
Spread the love

ಕಾಪು : ಬಿಜೆಪಿ ಸರಕಾರದ ಅವಧಿಯ ಸಾಧನೆಗಳನ್ನು ತನ್ನದೇ ಸಾಧನೆ ಎಂದು ಬಿಂಬಿಸುತ್ತಾ ಯಾವುದೇ ತತ್ವ ಸಿದ್ದಾಂತವಿಲ್ಲದೆ ಅಧಿಕಾರದ ಲಾಲಸೆಯಿಂದ ಪಕ್ಷದಿಂದ ಪಕ್ಷಕ್ಕೆ ಹಾರುವ ಪಕ್ಷಾಂತರವೇ ಜಯಪ್ರಕಾಶ್ ಹೆಗ್ಡೆಯವರ ಸಾಧನೆಯಾಗಿದೆ ಎಂದು ಕಾಪು ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ತಿಳಿಸಿದ್ದಾರೆ. ಅವರು ಹಿರಿಯಡ್ಕ ದೇವಾಡಿಗರ ಸಭಾ ಭವನದಲ್ಲಿ ನಡೆದ ಬಿಜೆಪಿ ಹಿರಿಯಡ್ಕ ಮಹಾ ಶಕ್ತಿಕೇಂದ್ರ ವ್ಯಾಪ್ತಿಯ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಮಲ್ಪೆ ಬಂದರು ಮತ್ತು ಹೆಜಮಾಡಿ ಬಂದರು ಅಭಿವೃದ್ಧಿಯನ್ನು ತನ್ನ ಸಾಧನೆ ಎಂದು ಸುಳ್ಳು ಪ್ರಚಾರ ಗಿಟ್ಟಿಸಲು ವಿಫಲ ಯತ್ನ ನಡೆಸಿರುವ ಜಯಪ್ರಕಾಶ್ ಹೆಗ್ಡೆ ನಡೆ ಹಾಸ್ಯಾಸ್ಪದ. ಹಲವಾರು ವರ್ಷಗಳಿಂದ ತಾನು ಪ್ರತಿನಿಧಿಸಿದ್ದ ಕ್ಷೇತ್ರ ವ್ಯಾಪ್ತಿಯ ಹಂಗಾರಕಟ್ಟ ಮತ್ತು ಕೋಡಿ ಕನ್ಯಾನ ಬಂದರು ಅಭಿವೃದ್ಧಿಗೆ ಏನು ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಹೆಗ್ಡೆ ಜನತೆಯ ಮುಂದೆ ಬಹಿರಂಗಪಡಿಸಲಿ ಎಂದರು.

ಈ ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ಮಲ್ಪೆ ಬಂದರಿನ ಬಳಿ ಮೀನುಗಾರಿಕೆಗಾಗಿ ಮೀಸಲಿಟ್ಟದ್ದ ಜಾಗವನ್ನು ಒಳ ಒಪ್ಪಂದದ ಮೂಲಕ ಟೆಬ್ಮಾ ಶಿಪ್ ಯಾರ್ಡ್ ಕಂಪೆನಿಗೆ ನೀಡಿ ಮೀನುಗಾರರ ಅನ್ನದ ಬಟ್ಟಲಿಗೆ ವಿಷ ಹಾಕಿದ ಅನ್ಯಾಯವನ್ನು ಮೀನುಗಾರರು ಎಂದೂ ಮರೆತಿಲ್ಲ ಎಂದರು.

ಕೋಟ ಗೆಲುವು ಶತಸಿದ್ಧ : ಗುರ್ಮೆ
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಅನುಭವಿ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಪಕ್ಷ ಅಭ್ಯರ್ಥಿಯನ್ನಾಗಿಸಿರುವುದು ಸಮಸ್ತ ಕಾರ್ಯಕರ್ತರಿಗೆ ಹೆಮ್ಮೆ ಎನಿಸಿದೆ. ಹಿಂದುತ್ವ, ಅಭಿವೃದ್ದಿ ಹಾಗೂ ರಾಷ್ಟ್ರೀಯ ಚಿಂತನೆಯ ಮೇಲೆ ಈ ಬಾರಿಯ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಬಂಟ ಸಮಾಜ ಸಹಿತ ಇತರ ಎಲ್ಲಾ ಜಾತಿ, ಸಮುದಾಯಗಳು ಹಿಂದುತ್ವ ಹಾಗೂ ದೇಶದ ವಿಚಾರದಲ್ಲಿ ಒಂದಾಗಿ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸುವ ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಲು ಪಣತೊಟ್ಟಿದ್ದಾರೆ. ಕೋಟ ಗೆಲುವು ಶತಸಿದ್ಧ. ಜನತೆ ಈ ಹಿಂದೆ ನೀಡಿದ ಸಹಕಾರದಂತೆ ಈ ಬಾರಿಯೂ ಕೋಟ ಶ್ರೀನಿವಾಸ ಪೂಜಾರಿಯವರನ್ನು ಗರಿಷ್ಠ ಮತಗಳ ಅಂತರದಿಂದ ಗೆಲ್ಲಿಸಲು ಕೈಜೋಡಿಸಬೇಕು ಎಂದು ವಿನಂತಿಸಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಿ ದೇಶಕ್ಕೆ ಪ್ರಧಾನಿ ಮೋದಿಯವರ ನೇತೃತ್ವ ಹಾಗೂ ಹಿಂದುತ್ವದ ಒಗ್ಗಟ್ಟಿನ ಬಲದ ಔಚಿತ್ಯವನ್ನು ವಿಶ್ಲೇಷಿಸಿ ಮಾತನಾಡಿ, ದೇಶದ ಒಳಿತು, ಭದ್ರತೆ ಹಾಗೂ ಅಭಿವೃದ್ಧಿಗಾಗಿ ನರೇಂದ್ರ ಮೋದಿಯವರನ್ನು ಮಗದೊಮ್ಮೆ ಪ್ರಧಾನಿಯನ್ನಾಗಿಸಲು ನನ್ನನ್ನು ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಶಾಸಕ ಯಶ್ಪಾಲ್ ಎ. ಸುವರ್ಣ, ಮಾಜಿ ಶಾಸಕ ಕೆ.ರಘುಪತಿ ಭಟ್, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಪ್ರಮೋದ್ ಮಧ್ವರಾಜ್, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ‌.ಸುವರ್ಣ, ಜಿಲ್ಲಾ ವಕ್ತಾರೆ ಗೀತಾಂಜಲಿ ಎಮ್. ಸುವರ್ಣ, ಮಂಡಲ ಪ್ರಭಾರಿಗಳಾದ ನಯನಾ ಗಣೇಶ್, ಶ್ಯಾಮಲಾ ಎಸ್. ಕುಂದರ್, ಕಾಪು ಮಂಡಲಾಧ್ಯಕ್ಷ ಜಿತೇಂದ್ರ ಶೆಟ್ಟಿ, ನಿಕಟಪೂರ್ವ ಮಂಡಲಾಧ್ಯಕ್ಷ ಶ್ರೀಕಾಂತ ನಾಯಕ್, ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಜಿಯಾನಂದ ಹೆಗ್ಡೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಶೆಟ್ಟಿ ಹಾಗೂ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

   

Related Articles

error: Content is protected !!