ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿಯ ಅಧಿಕೃತ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಬುಧವಾರ ಸಹಸ್ರಾರು ಕಾರ್ಯಕರ್ತರು, ಗಣ್ಯರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರತಿ ಬೂತ್‌ಗಳಲ್ಲೂ ಕಾರ್ಯಕರ್ತರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬೈಂದೂರಿನಿಂದಲೇ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡುವ ಸಂಕಲ್ಪ ಮಾಡಿದರು.
ಬಿ.ವೈ. ರಾಘವೇಂದ್ರ ಅವರು ನಾಮಪತ್ರ ಸಲ್ಲಿಕೆಗೂ ಪೂರ್ವದಲ್ಲಿ ಶಿವಮೊಗ್ಗದ ಪ್ರಮುಖ ಬೀದಿಗಳಲ್ಲಿ ಬೃಹತ್ ರೋಡ್‌ಶೋ ನಡೆಸಿ, ನಂತರ ಬೈಂದೂರಿನ ಜನಪ್ರಿಯ ಶಾಸಕರಾದ ಗುರುರಾಜ ಗಂಟಿಹೊಳೆ, ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಸಹಿತವಾಗಿ ಪ್ರಮುಖರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಇದೇ ವೇಳೆಗೆ ಬೈಂದೂರಿನ ಬಿಜೆಪಿ ಕಾರ್ಯಕರ್ತರು ತಮ್ಮ ಬೂತ್‌ಗಳಲ್ಲಿ ಇರುವ ದೇವಸ್ಥಾನದಲ್ಲಿ ಬಿ.ವೈ. ರಾಘವೇಂದ್ರ ಅವರ ಗೆಲುವಿಗಾಗಿ ಕೆಲವು ಕಡೆ 108 ತೆಂಗಿನ ಕಾಯಿ ಸಮರ್ಪಣೆ ಸಹಿತ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಪ್ರತಿ ಬೂತ್‌ನಲ್ಲೂ ಮತ ಪ್ರಮಾಣ ಹೆಚ್ಚಿಸುವ ಮೂಲಕ ಬಿಜೆಪಿ ಅಭ್ಯರ್ಥಿಗೆ ಕಳೆದ ಬಾರಿಗಿಂತ ಕನಿಷ್ಠ ಶೇ.30ರಿಂದ ಶೇ.40ರಷ್ಟು ಮತ ಹೆಚ್ಚು ಬರುವಂತೆ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಿದರು
ಕೇಸರಿ ಸುನಾಮಿ
ನಾಮಪತ್ರ ಸಲ್ಲಿಕೆಗೂ ಪೂರ್ವದಲ್ಲಿ ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಬೃಹತ್ ಮೆರವಣಿಗೆ ಹೊರಟಿತ್ತು. ಮೆರವಣಿಗೆಯ ಉದ್ದಕ್ಕೂ ಶಿವಮೊಗ್ಗದ ಬೀದಿ ಬೀದಿಗಳಲ್ಲಿ ಸಹಸ್ರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು, ಮುಖಂಡರು, ಹಿತೈಷಿಗಳು ಬಿಜೆಪಿಯ ಬಾವುಟ ಮತ್ತು ಕೇಸರಿ ಬಾವುಟ ಹಿಡಿದು ಭಾರತ್ ಮಾತಾ ಕೀ ಜೈ, ಬಿಜೆಪಿಗೆ ಜೈ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದ್ದವು. ಕ್ಷೇತ್ರದ ಎಲ್ಲ ಭಾಗದಿಂದಲೂ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಹಾಗೆಯೇ ಬೈಂದೂರಿನಿಂದ ಶಾಸಕರಾದ ಗುರುರಾಜ ಗಂಟಿಹೊಳೆ ಅವರ ಮುಂದಾಳತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಪದಾಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಶಿವಮೊಗ್ಗದಲ್ಲಿ ಗುರುವಾರ ಸೇರಿದ್ದ ಬಿಜೆಪಿ ಸುನಾಮಿ ವಿರೋಧ ಪಕ್ಷಗಳಿಗೆ ಚುನಾವಣೆಗೂ ಮೊದಲೇ ಸೋಲಿನ ಭಯ ಹುಟ್ಟಿಸಿದೆ.