ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ಬಿ.ವೈ. ರಾಘವೇಂದ್ರ ಅವರು ಗುರುವಾರ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಬೈಂದೂರು ಮಂಡಲ ಬಿಜೆಪಿ ಯುವಮೋರ್ಚಾದ ವತಿಯಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಶುಕ್ರವಾರ ಬೆಳಗ್ಗೆ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಬೈಂದೂರಿನಿಂದಲೇ ಒಂದು ಲಕ್ಷ ಲೀಡ್ ನೀಡುವ ಸಂಕಲ್ಪ ಮಾಡಿದರು. ಬಿ.ವೈ.ರಾಘವೇಂದ್ರ ಅವರು ಈ ಬಾರಿ ಗರಿಷ್ಠ ಅಂತರದಲ್ಲಿ ಜಯ ಸಾಧಿಸಬೇಕು. ಅದಕ್ಕೆ ಬೈಂದೂರು ಕ್ಷೇತ್ರದ ಪ್ರತಿ ಬೂತ್ ಗಳಲ್ಲೂ ಬಿಜೆಪಿಗೆ ಮತ ಪ್ರಮಾಣ ಹೆಚ್ಚಿಸುವ ಮೂಲಕ ಒಂದು ಲಕ್ಷಕ್ಕೂ ಅಧಿಕ ಲೀಡ್ ಕೊಡಿಸಲು ಜನಪ್ರಿಯ ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಬೂತ್ ಕಡೆಗೆ ಸಮೃದ್ಧ ನಡಿಗೆ ಆರಂಭಿಸಿ, ಎಲ್ಲ ಬೂತ್ ಗಳಲ್ಲೂ ಸಂಚರಿಸಿ ಕಾರ್ಯಕರ್ತರು, ಮುಖಂಡರಲ್ಲಿ ಉತ್ಸಾಹ ತುಂಬುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಮಂಡಲದ ಯುವಮೋರ್ಚಾದ ಪದಾಧಿಕಾರಿಗಳು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿಯವರ ಸಮ್ಮುಖದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಶುಕ್ರವಾರ ಕೊಲ್ಲೂರಿನಲ್ಲಿ ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಶುಕ್ರವಾರ ಮಾಡುವ ಸಂಕಲ್ಪ ಶೀಘ್ರ ಈಡೇರುತ್ತದೆ ಎಂಬ ವಾಡಿಕೆಯೂ ಇದೆ. ಹೀಗಾಗಿಯೇ ಯುವಮೋರ್ಚಾ ಕಾರ್ಯಕರ್ತರು ಬಿ. ವೈ ರಾಘವೇಂದ್ರ ಅವರಿಗೆ ಬೈಂದೂರು ಕ್ಷೇತ್ರದಲ್ಲಿ 1 ಲಕ್ಷ ಲೀಡ್ ಕೊಡಿಸಲು ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಯುವಮೋರ್ಚ ಅಧ್ಯಕ್ಷ ಗಜೇಂದ್ರ ಬೇಲೆಮನೆ, ಪ್ರಧಾನಕಾರ್ಯದರ್ಶಿಗಳಾದ ಪ್ರಸಾದ್ ಪಿ. ಬೈಂದೂರ್, ಅನುರ್ ಮೆಂಡನ್, ಯುವಮೋರ್ಚ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಸೋಮಯ್ಯ, ಪ್ರಮುಖರಾದ ಶರತ್ ಶೆಟ್ಟಿ ಉಪ್ಪುಂದ, ಜಯಾನಂದ ಹೋಬಳಿದಾರ್ ಮತ್ತು ಯುವಮೋರ್ಚ ಪದಾಧಿಕಾರಿಗಳು ಭಾಗಿಯಾಗಿದ್ದರು.