ಬೆಂಗಳೂರು : ರಾಜ್ಯದಲ್ಲಿ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೆ ಒಂದು ವಾರ ಬಾಕಿ ಇರುವಂತೆ ಎಲ್ಲ ರಾಜಕೀಯ ಪಕ್ಷಗಳ ಪ್ರಚಾರ ಬಿರುಸು ಪಡೆಯುತ್ತಿದ್ದು, ಆರು ದಿನಗಳ ಅಂತರದಲ್ಲಿ ಪ್ರಧಾನಿ ನರೇಂದ್ರಮೋದಿ ಮತ್ತೊಮ್ಮೆ ರಾಜ್ಯಕ್ಕಾಗಮಿಸುತ್ತಿದ್ದಾರೆ. ಶನಿವಾರ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಬೃಹತ್ ಸಾರ್ವ ಜನಿಕ ಸಭೆಗಳಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುತ್ತಾರೆ. ಮಧ್ಯಾಹ್ನ 3.30ಕ್ಕೆ ಚಿಕ್ಕಬಳ್ಳಾಪುರದ ಚೊಕ್ಕಹಳ್ಳಿ ಬೈಪಾಸ್ ಸಮೀಪ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಾರೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಿಂದ ಈ ಸಭೆಯಲ್ಲಿ ಜನ ಪಾಲ್ಗೊಳ್ಳಲಿದ್ದು, 1 ಲಕ್ಷ ಜನ ಭಾಗವಹಿಸುವ ಸಾಧ್ಯತೆ ಇದೆ. ಸಂಜೆ 5.30ಕ್ಕೆ ಬೆಂಗಳೂರು ಅರಮನೆ ಮೈದಾನದ ಗಾಯತ್ರಿ ವಿಹಾರ್ನಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.