Home » ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ
 

ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ

ಕಿಶೋರ್ ಕುಮಾರ್ ಕುಂದಾಪುರ

by Kundapur Xpress
Spread the love

ಉಡುಪಿ : ಗ್ಯಾರಂಟಿ ಹೆಸರಿನಲ್ಲಿ ಜಾಹೀರಾತು ನೀಡಿ ಬಿಟ್ಟಿ ಪ್ರಚಾರ ಪಡೆಯಲು ವಿಫಲ ಯತ್ನ ನಡೆಸುತ್ತಿರುವ ಕಾಂಗ್ರೆಸ್ ರಾಜ್ಯದ ಅಭಿವೃದ್ಧಿಗೆ ತಿಲಾಂಜಲಿಯನ್ನಿತ್ತು ರಾಜ್ಯವನ್ನು ದಿವಾಳಿಯ ಅಂಚಿಗೆ ನೂಕಿದೆ. ಜನರ ತೆರಿಗೆ ಹಣದಲ್ಲಿ ಗ್ಯಾರಂಟಿಗಳನ್ನು ಘೋಷಿಸಿ ರಾಜ್ಯದ ಅಭಿವೃದ್ಧಿಗೆ ಚಿಕ್ಕಾಸನ್ನೂ ನೀಡದ ರಾಜ್ಯ ಕಾಂಗ್ರೆಸ್ ಸರಕಾರ ಬೊಕ್ಕಸವನ್ನು ಬರಿದಾಗಿಸಿ ಕೇoದ್ರ ಸರಕಾರದ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುತ್ತಾ ಚೆoಬು ಹಿಡಿದು ಹೆಚ್ಚುವರಿ ಅನುದಾನವನ್ನು ಯಾಚಿಸುತ್ತಿರುವುದು ವಿಶಾಧನೀಯ. ಕಾಂಗ್ರೆಸ್ ಸರಕಾರ ಗ್ಯಾರಂಟಿಗಳ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಬಿಡುಗಡೆ ಮಾಡಿರುವ ಅನುದಾನದ ವಿವರವನ್ನೂ ನೀಡಲಿ. ಈ ನಿಟ್ಟಿನಲ್ಲಿ ದೇಶದ ಭದ್ರತೆ, ಅಭಿವೃದ್ಧಿ ಹಾಗೂ ಆರ್ಥಿಕತೆ ಸದೃಢಗೊಳಿಸಲು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಿ ಬೆಂಬಲಿಸಲು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮನವಿ ಮಾಡಿದರು.

ಅವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರ ಪರ ಏ.24ರಂದು ಉಡುಪಿ ನಗರದಾದ್ಯoತ ನಡೆದ ಬಿರುಸಿನ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

‘ಮೂರು ತಲೆ ಮಾರಿಗೆ ಆಗುವಷ್ಟು ಕೂಡಿಟ್ಟಿದ್ದೇವೆ’ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿಯವರನ್ನು ಶನಿ ಎಂದು ಕರೆದಿದ್ದಾರೆ. ಭ್ರಷ್ಟಾಚಾರಿಗಳ ಪಾಲಿಗೆ ಮೋದಿ ಶನಿಯಾಗಿಯೇ ಕಾಡುವುದು ಸಹಜ. ಇದು ಕಾಂಗ್ರೆಸ್ಸಿಗೆ ಸೋಲಿನ ಭಯ ಯಾವ ಮಟ್ಟದಲ್ಲಿದೆ ಎಂಬದನ್ನು ಬಿಂಬಿಸುತ್ತದೆ ಎಂದು ಅವರು ತಿಳಿಸಿದರು.

‘ಬಿಜೆಪಿಗರು ಪ್ರಧಾನಿ ಮೋದಿ ಹೆಸರಲ್ಲಿ ಮತ ಯಾಚಿಸುತ್ತಾರೆ’ ಎಂದಿರುವ ಕಾಂಗ್ರೆಸ್ ಅಭ್ಯರ್ಥಿ ಕೂಡ ಸ್ವಯಂ ತಮ್ಮ ನಾಯಕ ರಾಹುಲ್ ಗಾಂಧಿ ಹೆಸರಲ್ಲೇ ಮತ ಯಾಚಿಸುವುದು ಉತ್ತಮ. ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸಿ ನಡೆಸಿದ ರೋಡ್ ಶೋ ಕಾರ್ಯಕರ್ತರು ಮತ್ತು ಮತದಾರರಲ್ಲಿ ಹೊಸ ಸಂಚಲನ ಮೂಡಿಸಿ ಮತಗಳ ಪ್ರಮಾಣ ಹೆಚ್ಚಳಕ್ಕೆ ನಾಂದಿ ಹಾಡಿದೆ. ಕಾರ್ಯಕರ್ತರ ಹುಮ್ಮಸ್ಸಿನ ಮನೆ ಮನೆ ಪ್ರಚಾರದ ಜೊತೆಗೆ ರಾಜ್ಯ, ಅಂತರ್ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ರೋಡ್ ಶೋ, ಸಮಾವೇಶಗಳು ಮತದಾರರಲ್ಲಿ ಪ್ರೇರಣೆ ತುಂಬಿವೆ ಎಂದರು.

ಸಂಘಟಿತ ಪರಿಶ್ರಮದ ಫಲವಾಗಿ ಏ.26ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಗರಿಷ್ಠ ಪ್ರಮಾಣದಲ್ಲಿ ಬಿಜೆಪಿ ಪರ ಮತ ಚಲಾಯಿಸುವ ಮೂಲಕ ಜೂನ್ 4ರಂದು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಅತ್ಯಂತ ಹೆಚ್ಚಿನ ಬಹುಮತದಿಂದ ಗೆಲ್ಲುವ ಪೂರ್ಣ ವಿಶ್ವಾಸವಿದೆ. ಈ ಹಿನ್ನೆಲೆಯಲ್ಲಿ ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಲು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಮಹತ್ಕಾರ್ಯಕ್ಕೆ ಜನತೆ ಸರಳ ಸಜ್ಜನಿಕೆಯ ಅನುಭವಿ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ದೊಡ್ಡ ಅಂತರದ ಮತಗಳಿಂದ ವಿಜಯಶಾಲಿಯನ್ನಾಗಿಸಬೇಕು ಎಂದು ಕಿಶೋರ್ ಕುಮಾರ್ ಕುಂದಾಪುರ ಮನವಿ ಮಾಡಿದರು.

   

Related Articles

error: Content is protected !!