ರಾಣಿಬೆನ್ನೂರು: ಮೇ 7ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆಯಲಿರುವ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬುಧವಾರ ಹುಬ್ಬಳ್ಳಿ ಯಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ ಮತಯಾಚಿಸಿದರು. ಇದಕ್ಕೂ ಮೊದಲು ಹಾವೇರಿ ಜಿಲ್ಲೆ ರಾಣಿಬೆನ್ನೂರಿನಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಬೃಹತ್ ರೋಡ್ ಶೋ ನಡೆಸಿದರು.
ಸಂಜೆ 5.00 ರ ಸುಮಾರಿಗೆ ರಾಣಿಬೆನ್ನೂರಿಗೆ ಆಗಮಿಸಿದ ಶಾ, ಸುಮಾರು ಒಂದು ಕಿ.ಮೀ.ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಪರ ಮತ ಯಾಚಿಸಿದರು. ಈ ವೇಳೆ, ದಾರಿಯುದ್ದಕ್ಕೂ ಅಪಾರ ಜನಸಾಗರ ಸೇರಿತ್ತು. ಪ್ರಾರಂಭದಿಂದ ಕೊನೆಯವರೆಗೂ ಅಮಿತ್ ಶಾ ಅವರು ಜನರತ್ತ ಗುಲಾಬಿ ಹೂಗಳನ್ನು ಎಸೆದು ಹುರಿ ದುಂಬಿಸಿದರು. ಜನರ ಕೈಯಲ್ಲಿ ಕೇಸರಿ, ಜೆಡಿಎಸ್ ಬಾವುಟಗಳು ಹಾರಾಡುತ್ತಿದ್ದವು. ಜನರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಅಮಿತ್ ಶಾ ಫೋಟೋ #ಕ್ಕಿಸುತ್ತಾ ಅವರ ಬಗ್ಗೆ ತಮಗಿರುವ ಅಭಿಮಾನ ಪ್ರದರ್ಶಿಸಿದರು. ಎಲ್ಲ ಕಡೆ ಜೈ ಶ್ರೀರಾಮ್, ಅಮಿತ್ ಶಾ, ಮೋದಿ ಮೋದಿ ಘೋಷಣೆಗಳು ಕೇಳಿ ಬಂದವು. ಯಾತ್ರೆಯ ಕೊನೆಯಲ್ಲಿ 5 ನಿಮಿಷ ಮಾತನಾಡಿ, ಕಮಲದ ಬಟನ್ ಒತ್ತಿ, ಬೊಮ್ಮಾಯಿಗೆ, ಮೋದಿಗೆ ಓಟ್ ಹಾಕಿದಂತಾಗುತ್ತದೆ ಎಂದು ಮನವಿ ಮಾಡಿದರು