ಹುಬ್ಬಳ್ಳಿ : ವಿದ್ಯಾರ್ಥಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆ ದಾರಿಯನ್ನು ಸರ್ಕಾರ ತಪ್ಪಿಸುತ್ತಿದೆ. ಈ ಪ್ರಕರಣದ ಹಿಂದೆ ಪಿಎಫ್‌ಐ ಸಂಘಟನೆ ಇದೆಯೇ?” ಆರೋಪಿ ಫಯಾಜ್ ಹಿಂದೆ ಯಾರಿದ್ದಾರೆ? ಮತಾಂತರಕ್ಕೆ ಒತ್ತಾಯ ಮಾಡಿದ್ದಾರೆ ಎನ್ನುವ ನಿಟ್ಟಿನಲ್ಲಿ ತನಿಖೆ ನಡೆಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಗ್ರಹಿಸಿದರು.
ಇಲ್ಲಿಯ ಬಿಡನಾಳದಲ್ಲಿರುವ ವಿದ್ಯಾರ್ಥಿನಿ ನೇಹಾ ಅವರ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಯಾರೂ ಈ ಪ್ರಕರಣದಲ್ಲಿ ರಾಜಕೀಯ ಮಾಡಬಾರದು. ಇದೊಂದು ಭೀಕರ ಹತ್ಯೆಯಾಗಿದ್ದು, ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾವ ಮಾಡುತ್ತೇನೆ. ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದರು. ಪ್ರಕರಣದ ಸಾಕ್ಷಿಗಳನ್ನು ಬೇಗ ಸಂಗ್ರಹಿಸಬೇಕು. ಫಯಾಜ್ ಹಿಂದೆ ಇರುವ ವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸದಿರುವುದನ್ನು ಗಮನಿಸಿದರೆ, ಕಾಣದ ಕೈವಾಡ ಇದೆ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ. ಸಿಐಡಿ ತನಿಖೆ ಬಗ್ಗೆ ನಂಬಿಕೆಯಿಲ್ಲ ಎಂದರು. ಶಾಸಕರಾದ ಬಸವರಾಜ ಬೊಮ್ಮಾಯಿ, ಮಹೇಶ ಟೆಂಗಿನಕಾಯಿ ಇದ್ದರು