ಬೆಂಗಳೂರು : ಮೈಸೂರು ಜಿಲ್ಲೆ ಕೆ.ಆರ್.ನಗರದ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಅಧಿಕಾರಿಗಳು ಶನಿವಾರ ಸಂಜೆ ಬಂಧಿಸಿದ್ದಾರೆ.
ಪ್ರಕರಣ ದಾಖಲಾದ ಬೆನ್ನಲ್ಲೇ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಎಚ್ .ಡಿ.ರೇವಣ್ಣ, ವಕೀಲರ ಮೂಲಕ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಈ ಅರ್ಜಿ ಕುರಿತು ನ್ಯಾಯಾಲಯವು ಶುಕ್ರವಾರ ಮತ್ತು ಶನಿವಾರ ಸುದೀರ್ಘ ವಿಚಾರಣೆ ನಡೆಸಿತು. ವಾದ-ಪ್ರತಿವಾದ ಆಲಿಸಿ ಶನಿವಾರ ಸಂಜೆ 6.30ಕ್ಕೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.
ಇದರ ಬೆನ್ನಲ್ಲೇ 10 ಮಂದಿ ಎಸ್‌ಐಟಿ ಅಧಿಕಾರಿಗಳ ತಂಡವು ಪದ್ಮನಾಭನಗರಕ್ಕೆ ತೆರಳಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಯಲ್ಲಿದ್ದ ಆರೋಪಿ ಎಚ್.ಡಿ.ರೇವಣ್ಣ ಅವರನ್ನು ಬಂಧಿಸಿ ಸಿಐಡಿ ಕಚೇರಿಗೆ ಕರೆತಂದಿತು.
ಎಚ್.ಡಿ.ರೇವಣ್ಣ ಅವರನ್ನು ಕೆಲ ಕಾಲ ಸಿಐಡಿ ಕಚೇರಿಯಲ್ಲಿ ಕೂರಿಸಿದ ಎಸ್‌ಐಟಿ ಅಧಿಕಾರಿಗಳು, ರಾತ್ರಿ ಸುಮಾರು 9 ಗಂಟೆಗೆ ಶಿವಾಜಿನಗರದ బారింగా ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ರೇವಣ್ಣ ಆರೋಗ್ಯ ತಪಾಸಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೌರಿಂಗ್ ಆಸ್ಪತ್ರೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರಕ್ತದೊತ್ತಡ, ಮಧುಮೇಹ ಸೇರಿದಂತೆ ನಿಯಮಾನುಸಾರ ಆರೋಗ್ಯ ತಪಾಸಣೆ ಮಾಡಿಸಿ ಬಳಿಕ ಎಸ್‌ಐಟಿ ಕಚೇರಿಗೆ ಕರೆತರಲಾಯಿತು