ಕೋಟ: ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಸಮೀಪದ ಸಂತೆಕಟ್ಟೆಯಲ್ಲಿ ನಡೆಯುತ್ತಿರುವ ಅಂಡರ್‍ಪಾಸ್ ಕಾಮಗಾರಿಯು ಮಂದಗತಿಯಲ್ಲಿ ನಡೆಯುತ್ತಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ವಾಹನ ಸಂಚಾರಕ್ಕೆ ಅಡೆತಡೆಯಾದ ಬಗ್ಗೆ ನೂರಾರು ಸಂಖ್ಯೆಯ ಸಾರ್ವಜನಿಕರು ತಮಗೆ ತೊಂದರೆಯಾಗುತ್ತಿರುವ ಬಗ್ಗೆ ಮನವಿಯನ್ನು ಮಾಡಿರುತ್ತಾರೆ. ಅಲ್ಲದೇ, ಟ್ರಾಫಿಕ್ ಜಾಮ್‍ನಿಂದ ತುರ್ತು ಚಿಕಿತ್ಸೆಗೆ ಕರೆದೊಯ್ಯುವ ಅಂಬುಲೆನ್ಸ್ ಸಹಿತ ಇತರ ವಾಹನಗಳು ರಸ್ತೆಯಲ್ಲಿ ತಾಸುಗಟ್ಟಲೆ ನಿಲ್ಲುವ ಸಂದರ್ಭ ಒದಗಿ ಬಂದಿರುತ್ತದೆ. ಸಾರ್ವಜನಿಕರ ಮನವಿಯಂತೆ ಮತ್ತು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಗುವ ತೊಂದರೆಯನ್ನು ತಪ್ಪಿಸಲು ಅಂಡರ್‍ಪಾಸ್ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರಿಗೆ ಹಾಗೂ ಅಭಿಯಂತರರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾಗಿ ಮತ್ತು ಕಾಮಗಾರಿ ಮುಗಿಯುವ ತನಕ ವಾಹನ ದಟ್ಟಣೆ ಸರಿ ಪಡಿಸಲು ಸೂಕ್ತ ಬದಲು ವ್ಯವಸ್ಥೆ ಮಾಡಬೇಕೆಂದು ಇಂದು ಉಡುಪಿ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಕೋರಿದ್ದಾರೆ