ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ
ಬಾವಿಯ ಕೆಸರು ತೆಗೆಯಲು ಇಳಿಯುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದ ವ್ಯಕ್ತಿಯನ್ನು ಬೈಂದೂರು ಅಗ್ನಿಶಾಮಕ ಠಾಣೆಯ ಸಿಬಂದಿ ರಕ್ಷಿಸಿದ್ದಾರೆ. ಕಾಲ್ತೋಡು ಮೆಟ್ಟಿನಹೊಳೆಯಲ್ಲಿ ಮಧ್ಯಾಹ್ನ 12.30ರ ವೇಳೆಗೆ ಈ ಘಟನೆ ನಡೆದಿದೆ. ವ್ಯಕ್ತಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಶೀನ ನಾಯ್ಕ ಆನಂದ್, ನಾಗಪ್ಪ ಪಟಗಾರ್, ಹರೀಶ್ ಕುಲಾಲ್, ಶ್ರೀನಿವಾಸ ನಾಯ್ಕ ಕಿರಣ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಲಾರಿ ಡಿಕ್ಕಿ, ಗಂಭೀರ ಗಾಯ
ಸಾಲಿಗ್ರಾಮ ಬಸ್ ತಂಗುದಾಣದ ಬಳಿ ರಸ್ತೆ ದಾಟುತ್ತಿದ್ದ ಬಾಬಣ್ಣ ಎಂಬವರಿಗೆ ಲಾರಿ ಡಿಕ್ಕಿ ಹೊಡೆದು ಗಂಭೀರ ಗಾಯವಾಗಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀನು ಹಿಡಿಯಲು ಹೋದ ಯುವಕ ಸಾವು
ಕುಂದಾಪುರ: ತಾಲೂಕಿನ ಕೆಂಚನೂರು ಗ್ರಾಮದ ಕೆರೆಗೆ ಗಾಳ ಹಾಕಿ ಮೀನು ಹಿಡಿಯಲು ಹೋದ ಯುವಕ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ವೆಂಕ ಎಂಬವರ ಪುತ್ರ ಸುಧೀಂದ್ರ(31ವರ್ಷ) ಮೃತಪಟ್ಟವರು. ಅವರು ಸೋಮವಾರ ಮಧ್ಯಾಹ್ನ ಮನೆ ಸಮೀಪದ ಕಣ್ಣೀರೆ ಎಂಬಲ್ಲಿಗೆ ಗಾಳ ಹಾಕಿ ಮೀನು ಹಿಡಿಯಲು ಹೋಗಿದ್ದರು. ಕತ್ತಲು ಆವರಿಸಿದರು ಮನೆಗೆ ಬಂದಿರದ ಕಾರಣ ಹುಡುಕಾಡಿದಾಗ ಕೆರೆ ಸಮೀಪದ ಬಂಡೆಯ ಬಳಿ ಚಪ್ಪಲಿ, ಗಾಳದ ಬೆಂಡು ಪತ್ತೆಯಾಗಿತ್ತು. ಅನುಮಾನಗೊಂಡು ಈಜುಗಾರರನ್ನು ಕರೆಯಿಸಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ. ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಯುವಕ ನೀರಿಗೆ ಬಿದ್ದು ಸಾವು
ಕುಂದಾಪುರ: ತಾಲೂಕಿನ ಕಂದಾವರ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ತಿರುಗಾಡಿಕೊಂಡಿದ್ದ 35 ಹರೆಯದ ಅಪರಿಚಿತ ಯುವಕ ಸೋಮವಾರ ಸಟ್ಟಾಡಿ ತಿರುವಿನಲ್ಲಿರುವ ನದಿಗೆ ನೀರು ಕುಡಿಯಲು ಹೋಗಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ. ಪಂಚಾಯಿತಿ ಅಧ್ಯಕ್ಷೆ ಅನುಪಮ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.