ಬೈಂದೂರು : ಸಮೃದ್ಧ ಬೈಂದೂರು ಟ್ರಸ್ಟ್ ಹಾಗೂ ಅರುಣಾಚಲಂ ಟ್ರಸ್ಟ್ ಸಹಯೋಗದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಭಾಗದಲ್ಲಿ ನಿರ್ಮಾಣವಾಗುತ್ತಿರುವ ನವೀನ ಆವಿಷ್ಕಾರದ ಕಾಲು ಸಂಕಗಳ ಕಾಮಗಾರಿ ಪ್ರಗತಿ ಪರಿಶೀಲನೆಯನ್ನು ಮೇ 12ರಂದು ಶಾಸಕರಾದ ಗುರುರಾಜ್ ಗಂಟಿಹೊಳೆಯವರು ನಡೆಸಿದರು.
ತೊಂಬಟ್ಟು ಕಬ್ಬಿನಾಲೆ ಸಮೀಪ, ಯಡಮೊಗೆಯ ಕುಂಮ್ಟಿಬೇರುವಿನಲ್ಲಿ ಹಾಗೂ ವಂಡ್ಸೆಯ ಅಬ್ಬಿ ಹತ್ತಿರದ ಕಾಲು ಸಂಕಗಳ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದರು.
ಶಾಸಕರಾದ ಗುರುರಾಜ ಗಂಟಿಹೊಳೆಯವರು ಮಾತನಾಡಿ, ಬೈಂದೂರು ಕ್ಷೇತ್ರದ ವಿವಿಧ ಭಾಗದಲ್ಲಿ ಕಾಲು ಸಂಕಗಳ ತುರ್ತು ಅಗತ್ಯವಿದೆ. ಸರ್ಕಾರದಿಂದ ಕಾಲು ಸಂಕ ನಿರ್ಮಾಣ ಒಂದು ಭಾಗವಾದರೆ ಸಮೃದ್ಧ ಬೈಂದೂರು ಹಾಗೂ ಅರುಣಾಚಲಂ ಟ್ರಸ್ಟ್‌ನ ಒಡಂಬಡಿಕೆಯೊಂದಿಗೆ ಕೆಲವು ಕಡೆಗಳಲ್ಲಿ ಕಾಲು ಸಂಕಗಳನ್ನು ವಿನೂತನ ಆವಿಷ್ಕಾರದೊಂದಿಗೆ ನಿರ್ಮಾಣ ಮಾಡಲಾಗುತ್ತದೆ ಎಂದರು.
ಅರುಣಾಚಲಂ ಟ್ರಸ್ಟ್ ನಿಂದ ಹಂತ ಹಂತವಾಗಿ ಸುಮಾರು 50 ಕಾಲು ಸಂಕ ನಿರ್ಮಾಣದ ಭರವಸೆ ನೀಡಿದ್ದಾರೆ. ಮುಂಬರುವ ಮಳೆಗಾಲದೊಳಗೆ ಈ ಮೂರು ಕಾಲು ಸಂಕಗಳು ಸಿದ್ಧವಾಗಲಿದೆ. ಕ್ಷೇತ್ರದ ಜನತೆ ಕಾಲು ಸಂಕ ಇಲ್ಲದೇ ಸಮಸ್ಯೆ ಆಗಬಾರದು ಎಂಬ ಸದುದ್ದೇಶದಿಂದ ಅರುಣಾಚಲಂ ಟ್ರಸ್ಟ್‌ನೊಂದಿಗೆ ಒಪ್ಪಂದ ಮಾಡಿಕೊಂಡು ತುರ್ತು ಅಗತ್ಯವಿರುವ ಕೆಲವೆಡೆ ಕಾಲು ಸಂಕ ನಿರ್ಮಾಣ ಮಾಡುತ್ತಿದ್ದೇವೆ. ನವೀನ ಆವಿಷ್ಕಾರದೊಂದಿಗೆ ಕಾಲು ಸಂಕ ನಿರ್ಮಾಣವಾಗುತ್ತಿದೆ. ಅದರ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಖುದ್ದು ಸ್ಥಳಭೇಟಿಯ ಮೂಲಕ ನಡೆಸಲಾಗಿದೆ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆಯವರು ಮಾಹಿತಿ ನೀಡಿದರು.
ಚಂದ್ರಶೇಖರ ಶೆಟ್ಟಿ, ಪ್ರದೀಪ್ ಶೆಟ್ಟಿ, ಸಂಪತ್ ಪೂಜಾರಿ, ಡಾ. ಅತುಲ್ ಶೆಟ್ಟಿ, ಗೋಪಾಲ್ ಕಾಂಚನ್, ಬಾಲಚಂದ್ರ ಭಟ್, ಪ್ರಣೇಶ್ ಅಡಿಯಾಳ್, ಹರ್ಷ, ರೋಹಿತ್ ಶೆಟ್ಟಿ, ಪ್ರವೀಣ್ ಶೆಟ್ಟಿ ಕೊಡ್ಲಾಡಿ, ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು.
ಏನೀದು ನವೀನ ತಂತ್ರಜ್ಞಾನ
ಬೆಂಗಳೂರಿನ ಅರುಣಾಚಲಂ ಟ್ರಸ್ಟ್ ಖಾಸಗಿಯಾಗಿ ಕಾಲು ಸಂಕ ನಿರ್ಮಿಸಿಕೊಡುತ್ತಿದೆ. ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದೇವೆ. ಅದರ ಒಂದು ಭಾಗವಾಗಿ ತುರ್ತು ಅಗತ್ಯತೆಗೆ ಅನುಗುಣವಾಗಿ ಕಾಲು ಸಂಕ ನಿರ್ಮಿಸಲು ಅರುಣಾಚಲಂ ಟ್ರಸ್ಟ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಹಳೆಯ ಲಾರಿ, ಬಸ್ ಇತ್ಯಾದಿ ವಾಹನಗಳ ಚೆಸ್ಸಿ ಸಹಿತ ವಿವಿಧ ಪರಿಕರಗಳನ್ನು ಬಳಸಿ ಕಾಲು ಸಂಕ ನಿರ್ಮಿಸಲಾಗುತ್ತದೆ. ಸುಮಾರು 60ರಿಂದ 72 ಅಡಿಯಷ್ಟು ಉದ್ದದ ಕಾಲುಸಂಕ ನಿರ್ಮಿಸಲಾಗುತ್ತದೆ. ಒಂದು ಕಾಲು ಸಂಕ 36 ಅಡಿ ಬರುತ್ತದೆ. ಎರಡು ಕಾಲು ಸಂಕ ಜೋಡಿಸಿ ಗರಿಷ್ಠ 72 ಅಡಿ ಉದ್ದದ ಕಾಲು ಸಂಕ ನಿರ್ಮಾಣವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.