ಉಡುಪಿ : ಜೂನ್ 3ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ! ಧನಂಜಯ ಸರ್ಜಿ ಹೇಳಿದರು. ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಪಕ್ಷದ ಹಿರಿಯರು ವಿಧಾನ ಪರಿಷತ್ ಗೆ ಸ್ಪರ್ಧಿಸುವ ಅವಕಾಶ ನೀಡಿದ್ದಾರೆ. ವೈದ್ಯನಾಗಿ ಜನರ ನೋವು, ಕಷ್ಟಗಳನ್ನು ಅರ್ಥ ಮಾಡಿಕೊಂಡಿದ್ದು, ಸಮಾಜದ ಕೆಲಸ ಮಾಡುವ ಆಸೆ ಇದೆ. ಪ್ರಜ್ಞಾವಂತ ಪದವೀಧರ ಮತದಾರರು ಬೆಂಬಲಿಸುವ ವಿಶ್ವಾಸವಿದೆ ಎಂದರು. ಮೇ 16ರಂದು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸುವುದಾಗಿ ಅವರು ತಿಳಿಸಿದರು.
ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 14 ಮೆಡಿಕಲ್ ಕಾಲೇಜು, 30 ಇಂಜಿನಿಯರಿಂಗ್ ಕಾಲೇಜು, 100 ಉನ್ನತ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಅತೀ ಹೆಚ್ಚು ಅಭಿವೃದ್ಧಿ ಹೊಂದಿದ ಕ್ಷೇತ್ರವಾಗಿದೆ. ಸಾರಿಗೆ ಸಂಪರ್ಕ ವ್ಯವಸ್ಥೆ ಅತ್ಯುತ್ತಮವಾಗಿದೆ. ಈಗಾಗಲೇ 82,000 ಮಂದಿ ಪದವೀಧರರು ನೋಂದಾಯಿಸಿಕೊಂಡಿದ್ದು, ಪಕ್ಷದ ಕಾರ್ಯವೈಖರಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದರು. ಉಡುಪಿ ಜಿಲ್ಲೆಯಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದು, ಸಂಘಟನೆಗೆ ಶಕ್ತಿ ಇರುವ ಕ್ಷೇತ್ರವಾಗಿದೆ ಎಂದರು.
ಭಟ್ ಪಕ್ಷ ನಿಷ್ಠರು:
ಮಾಜಿ ಶಾಸಕ ರಘುಪತಿ ಭಟ್ ಪಕ್ಷದ ಹಿರಿಯ ಮುಖಂಡರಾಗಿದ್ದು, ಪಕ್ಷ ನಿಷ್ಠೆಗೆ ಹೆಸರಾಗಿದ್ದಾರೆ. ಸಂಘಟನೆಯ ಹಿರಿಯರು ಅವರೊಂದಿಗೆ ಮಾತನಾಡಿ ಎಲ್ಲಾ ಅಸಮಾಧಾನ ಬಗೆಹರಿಸಲಿದ್ದಾರೆ. ಅವರು ಸಂಘಟನೆ ಪರ ಕೆಲಸ ಮಾಡುವ ವಿಶ್ವಾಸವಿದೆ ಎಂದರು.
22,000 ಶಿಕ್ಷಕರ ನೋಂದಣಿ:
ನೈಋತ್ಯ ಶಿಕ್ಷಕರ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಲೋಕಸಭಾ ಚುನಾವಣೆ ಬಳಿಕ ವಿಧಾನ ಪರಿಷತ್ ಚುನಾವಣೆಯಲ್ಲೂ ಮುಂದುವರಿದಿದೆ. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಬಲಾಢ್ಯವಾಗಿದ್ದು, ಜೆಡಿಎಸ್ ಗೆಲುವಿಗೆ ಪೂರಕ ವಾತಾವರಣವಿದೆ. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ 22,000 ಮಂದಿ ಶಿಕ್ಷಕರು ನೋಂದಾಯಿಸಿಕೊಂಡಿದ್ದಾರೆ ಎಂದರು.
ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು