ಉಡುಪಿ : ಪರ್ಯಾಯ ಮಠಾಧೀಶರಾದ ಪರಮ ಪೂಜ್ಯ ಪುತ್ತಿಗೆ ಶ್ರೀಪಾದರ ಅಪೇಕ್ಷೆಯಂತೆ ಶ್ರೀಕೃಷ್ಣ ಮಠಕ್ಕೆ ಪೂಜ್ಯ ಮಹೇಶ್ವರಾನಂದ ಸ್ವಾಮೀಜಿ ತಮ್ಮ ಶಿಷ್ಯ ಶ್ರೀಅವತಾರ ಪುರಿ ಸ್ವಾಮೀಜಿಯವರ ಜೊತೆಗೆ ಆಗಮಿಸಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ದರ್ಶನ ಪಡೆದರು .
ಪೂಜ್ಯ ಮಹೇಶ್ವರಾನಂದ ಸ್ವಾಮೀಜಿಯವರು ಜಗತ್ತಿನಾದ್ಯಂತ ಯೋಗ ಮತ್ತು ಸನಾತನ ಧರ್ಮ ಪ್ರಚಾರ ಮಾಡುತ್ತ ದೇಶ ವಿದೇಶಗಳಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಶಾಖೆಗಳನ್ನು ಹೊಂದಿರುತ್ತಾರೆ. ಇವರಿಂದ ಭಾರತದಲ್ಲಿನ ಜೋಧಪುರದಲ್ಲಿ ಓಂ ಕಾರದ ಮಾದರಿಯಲ್ಲಿಯೇ ಅತ್ಯಾಕರ್ಷಕವಾಗಿ ಬೃಹತ್ ಮಂದಿರ ನಿರ್ಮಾಣ ಗೊಂಡಿರುವುದನ್ನು ಸ್ಮರಿಸಬಹುದು
ಪೂಜ್ಯ ಪುತ್ತಿಗೆ ಶ್ರೀಪಾದರು ಜಾಗತಿಕ ಶಾಂತಿ ಸಮ್ಮೇಳನದ ಸಭೆಯಲ್ಲಿ ಯುರೋಪಿನ ವಿಯೆನ್ನಾ ದೇಶಕ್ಕೆ ತೆರಳಿದಾಗ ಇವರ ಆಶ್ರಮದಲ್ಲಿಯೇ ತಂಗಿದ್ದನ್ನು ಪೂಜ್ಯರು ನೆನಪಿಸಿಕೊಂಡರು.
ಶ್ರೀಕೃಷ್ಣ ದರ್ಶನದ ಬಳಿಕ ಗೀತಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಪೂಜ್ಯ ಮಹೇಶ್ವರಾನಂದ ಸ್ವಾಮೀಜಿ ಮಾತಾಡುತ್ತ ಪೂಜ್ಯರ ಕೋಟಿ ಗೀತಾ ಲೇಖನ ಯಜ್ಞ ದ ಆಂದೋಲನ ಕಾರ್ಯಕ್ರಮವನ್ನು ವಿಶೇಷವಾಗಿ ಮೆಚ್ಚಿಕೊಂಡರು . ಉಭಯ ಶ್ರೀಪಾದರಿಗೂ ಮಠದ ವತಿಯಿಂದ ಶಾಲು ಹೊದಿಸಿ ಭಗವದ್ಗೀತಾ ಸ್ಮರಣಿಕೆ ನೀಡುವ ಮೂಲಕ ಗೌರವಿಸಲಾಯಿತು .
ಶ್ರೀಮಠದ ವಿಶೇಷ ಭಕ್ತರಾದ, ಪ್ರಸಾದ್ ನೇತ್ರಾಲಯದ ನಿರ್ದೇಶಕರಾದ , ನಾಡಿನ ಖ್ಯಾತ ನೇತ್ರ ತಜ್ಞ ಶ್ರೀ ಕೃಷ್ಣ ಪ್ರಸಾದ್ ರವರು ಸ್ವಾಗತಿಸಿದರು . ಶ್ರೀಮಠದ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯ ಧನ್ಯವಾದವಿತ್ತರು .