ಬೆಂಗಳೂರು : ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರ ಣದ ಸಂಬಂಧ ವಿದೇಶದಲ್ಲಿ ಅಜ್ಞಾತವಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ಬಂಧನ ವಾರಂಟ್ ಜಾರಿಗೊಳಿಸಿದೆ. ಈ ವಾರಂಟ್ ಹಿನ್ನಲೆಯಲ್ಲಿ ಸ್ವದೇಶಕ್ಕೆ ಮರಳಿದ ತಕ್ಷಣವೇ ಪ್ರಜ್ವಲ್ ಅವರ ಬಂಧನವಾಗಲಿದೆ. ಅಲ್ಲದೆ ಪ್ರಜ್ವಲ್ ಬಳಿಯಿರುವ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದತಿಗೆ ವಿಶೇಷ ತನಿಖಾ ದಳ (ಎಸ್ಐಟಿ) ಪ್ರಯತ್ನಿಸಬಹುದು. ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಎಸ್ಐಟಿ ಪತ್ರ ಬರೆಯಲಿದೆ ಎಂದು ವಿಶ್ವಸನೀಯ ಮೂಲಗಳು ಮಾಹಿತಿ ನೀಡಿವೆ.
ತಮ್ಮ ಮನೆಯ ಮಹಿಳಾ ಕೆಲಸದಾಳುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಹೊಳೆನರಸೀಪುರ ಠಾಣೆಯಲ್ಲಿ ಪ್ರಜ್ವಲ್ ಹಾಗೂ ಅವರ ತಂದೆ ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕೃತ್ಯದ ಸಂತ್ರಸ್ತ ಹೇಳಿಕೆ ಆಧರಿಸಿ ಪ್ರಜ್ವಲ್ ಮೇಲೆ 376 ರಡಿ (ಅತ್ಯಾಚಾರ) ಸೆಕ್ಷನ್ ಅನ್ನು ಸಹ ಎಸ್ಐಟಿ ಸೇರಿಸಿತ್ತು. ಈ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಪ್ರಜ್ವಲ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸುವಂತೆ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಮನವಿ ಮಾಡಿದ್ದರು. ಇದಕ್ಕೆ ಪೂರಕವಾಗಿ ಕೆಲ ದಾಖಲೆಗಳನ್ನು ಕೂಡಾ ನ್ಯಾಯಾಲಯಕ್ಕೆ ಅಧಿಕಾರಿಗಳು ಸಲ್ಲಿಸಿದ್ದರು