ಉಡುಪಿ : ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆಯ ಪ್ರಮಾಣ ತುಸು ಕಡಿಮೆಯಾಗಿದೆ. ಶುಕ್ರವಾರ ಹಗಲು ಮೋಡ, ಅಲ್ಲಲ್ಲಿ ತುಂತುರು ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮೇ 25ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗುಡುಗು, ಸಿಡಿಲಿನ ಆರ್ಭಟಕ್ಕೆ ಉಡುಪಿ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಒಬ್ಬರು ಹಾಗೂ ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಒಬ್ಬರ ಸಹಿತ ಇಬ್ಬರು ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಮಳೆಗೆ 20 ಮನೆಗಳಿಗೆ ಹಾನಿಯಾಗಿದೆ.
ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಇಡೀ ದಿನ ಮೋಡ ಕವಿದ ವಾತಾವರಣ, ಅಪರಾಹ್ನ ಮಂಗಳೂರಲ್ಲಿ ಹನಿ ಮಳೆಯಾಗಿದೆ. ಗ್ರಾಮೀಣ ಭಾಗದಲ್ಲಿ ನಸುಕಿನ ಜಾವ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನ ವೇಳೆಗೆ ಒಂದಷ್ಟು ಬಿಸಿಲು ಕಾಣಿಸಿದೆ. ಗುರುವಾರ ರಾತ್ರಿ ಸುರಿದ ಮಳೆಗೆ ಬಂಟ್ವಾಳದ ಪುದು ಎಂಬಲ್ಲಿ ಮನೆಯೊಂದರ ಕಂಪೌಂಡ್ ಕುಸಿದಿದೆ. ಇನ್ನೊಂದೆಡೆ ಹೈದರ್ ಎಂಬವರ ಅಡುಗೆ ಮನೆ ಕುಸಿದ ಘಟನೆ ಸಂಭವಿಸಿದೆ.
ಮಳೆ ಮುಂದುವರಿಕೆ ಸೂಚನೆ : ನೈಋತ್ಯ ಮಾನ್ಸೂನ್ ಶುಕ್ರವಾರ ಮಾಲ್ಮೀಮ್ಸ್ ಮತ್ತು ಕೊಮೊರಿನ್ ಪ್ರದೇಶ, ದಕ್ಷಿಣ ಬಂಗಾಳ ಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉಳಿದ ಭಾಗಗಳು ಹಾಗೂ ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ಮತ್ತಷ್ಟು ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಮೇ 25 ರಿಂದ 29ರ ವರೆಗೆ ಕರಾವಳಿಯಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.