ಮಂಗಳೂರು : ವಿಧಾನ ಪರಿಷತ್ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕೆಲವರು ಬಿಜೆಪಿ ವಿರುದ್ಧವಾಗಿ ಸ್ಪರ್ಧೆ ಮಾಡಿದ್ದಾರೆ. ಇದರ ಯಾವುದೇ ರೀತಿಯ ಪರಿಣಾಮ ಬಿಜೆಪಿ ಹಾಗೂ ಮೈತ್ರಿ ಅಭ್ಯರ್ಥಿಗಳ ಗೆಲುವಿನ ಮೇಲೆ ಆಗಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಂಡಾಯ ಸ್ಪರ್ಧಿಗಳು ತಾವು ಬಿಜೆಪಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿರುವುದು ಹಾಗೂ ನರೇಂದ್ರ ಮೋದಿ ಅವರ ಫೋಟೊ ಬಳಸಿಕೊಳ್ಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ ಯಾರೇನೇ ಮಾಡಿದರೂ, ಹೇಳಿದರೂ ಕೂಡ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಸಾಧ್ಯವಿಲ್ಲ, ಬಿಜೆಪಿ ಮೈತ್ರಿ ಅಭ್ಯರ್ಥಿಗಳಾದ ಭೋಜೇಗೌಡ ಹಾಗೂ ಡಾ. ಧನಂಜಯ ಸರ್ಜಿ ಅವರು ದೊಡ್ಡ ಅಂತರದಿಂದ ಗೆಲ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ವರಿಷ್ಠರ ತೀರ್ಮಾನ ಅಂತಿಮ :
ವಿಧಾನ ಪರಿಷತ್ ಮೂರು ಸ್ಥಾನಗಳ ಪೈಕಿ ಕರಾವಳಿಯವರಿಗೆ ಅವಕಾಶ ಇದೆಯಾ ಎಂಬ ಪ್ರಶ್ನೆಗೆ, ಅನೇಕ ಹೆಸರುಗಳಿವೆ. ಜಾತಿವಾರು, ಪ್ರಾಂತ್ಯವಾರು ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈ ಹೆಸರುಗಳನ್ನು ದೆಹಲಿಗೆ ಕಳುಹಿಸಿಕೊಟ್ಟಿದ್ದೇವೆ. ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ವಿನಾಕಾರಣ ಕಾರ್ಯಕರ್ತರನ್ನು, ಯುವಮೋರ್ಚಾ ಅಧ್ಯಕ್ಷರ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಿಕೊಂಡು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ. ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದರು