ಬೈಂದೂರು : ಮುಂಗಾರು ಪೂರ್ವ ಮಳೆ ಬಿರುಸುಗೊಂಡಿದ್ದು, ಜೂಲೈ ಮೊದಲ ವಾರದಲ್ಲಿ ಮುಂಗಾರ ಪ್ರವೇಶ ಮಾಡುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವ್ಯವಸ್ಥೆ ಅಗತ್ಯ ಮುನ್ನೆಚ್ಚರಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಮುಂಗಾರು ಪೂರ್ವ ಮಳೆಯು ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಸಿಡಿಲಾಘಾತದಿಂದ ಜೀವ ಹಾನಿ ಹಾಗೂ ಬಿರುಗಾಳಿಯಿಂದ ವಾಸ್ತವ್ಯದ ಮನೆ ಸೇರಿ ಅಪಾರ ಸಾರ್ವಜನಿಕ ಆಸ್ತಿ ಹಾನಿ ಆಗಿದೆ. ಪ್ರಸ್ತುತ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿ ಜಮೀನುಗಳಿಗೆ ಹಾಗೂ ಮನೆ ಅಂಗಳಕ್ಕೆ ನೀರು ನುಗ್ಗಿವೆ. ಸ್ಥಳೀಯ ಅಧಿಕಾರಿಗಳಿಗೆ ಈ ಬಗ್ಗೆ ನಿಗಾವಹಿಸಲು ಶಾಸಕರೂ ವಿಶೇಷ ಸೂಚನೆಯನ್ನು ನೀಡಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜನ ಪ್ರತಿನಿಧಿಗಳು ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಲು ಸಾಧ್ಯವಿಲ್ಲ. ಹೀಗಾಗಿ ಅಧಿಕಾರಿಗಳೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಜಿಲ್ಲಾಧಿಕಾರಿಗಳು ಸ್ಥಳೀಯ ಅಧಿಕಾರಿಗಳಿಗೆ ಮಳೆಗಾಲದ ಸಿದ್ಧತೆಗೆ ಅಗತ್ಯ ನಿರ್ದೇಶನ ನೀಡಬೇಕು. ಮಳೆಹಾನಿ ಪ್ರದೇಶಗಳಿಗೆ ಶಾಸಕರು ಈಗಾಗಲೇ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ್ದಾರೆ. ತುರ್ತು ಪರಿಹಾರ ಕ್ರಮ ಕೈಗೊಳ್ಳಲು ಹಾಗೂ ಮಳೆಗಾಲದಲ್ಲಿ ಉಂಟಾಗಬಹುದಾದ ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಬೇಕಾದ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಅದನ್ನು ತಕ್ಷಣದಿಂದಲೇ ಪಾಲಿಸಿ ಜಾರಿಗೆ ತರಬೇಕಾದ ತುರ್ತು ಅಗತ್ಯವಿದೆ. ಎಲ್ಲಾ ಹಂತದ ಅಧಿಕಾರಿ ವರ್ಗ ಸೇರಿದಂತೆ ಜಿಲ್ಲಾಡಳಿತವು ಈಗಾಗಲೇ ಪ್ರಾಕೃತಿಕ ವಿಕೋಪದಿಂದ ಹಾನಿ ಸಂಭವಿಸಿದ ಪ್ರಕರಣಗಳಿಗೆ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ತುರ್ತು ಪರಿಹಾರ ಒದಗಿಸಲು ಕ್ರಮ ವಹಿಸಬೇಕು. ಕೃತಕ ನೆರೆ ಉಂಟಾಗದಂತೆ ಪ್ರಮುಖ ಕಾಲುವೆ, ತೋಡುಗಳ ಹೂಳೆತ್ತಲು ಅಗತ್ಯ ಕ್ರಮ ವಾಗಬೇಕು. ತಾಲೂಕು ಆಡಳಿತವು ಸ್ಥಳೀಯಾಡಳಿತ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಮಳೆಗಾಲದ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೂರಕವಾದ ರಕ್ಷಣಾ ತಂಡ ಗಳನ್ನು ರಚಿಸಿ ಈಗಿನಿಂದಲೇ ಕಾರ್ಯಯೋನ್ಮುಖ ವಾಗಬೇಕು ಎಂಬುದು ಕ್ಷೇತ್ರದ ಜನತೆಯೆ ಒತ್ತಾಸೆಯಾಗಿದೆ