Home » ತಲೆಕೆಳಗಾದ ಪ್ರಜ್ವಲ್‌ ಪ್ಲಾನ್
 

ತಲೆಕೆಳಗಾದ ಪ್ರಜ್ವಲ್‌ ಪ್ಲಾನ್

by Kundapur Xpress
Spread the love

ಬೆಂಗಳೂರು : ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ಆರೋಪ ಹೊತ್ತುಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಬರುವಿಕೆಗೆ ಕ್ಷಣಗಣನೆ ಆರಂಭವಾಗಿದೆ. ಗುರುವಾರ ಮಧ್ಯರಾತ್ರಿ ಜರ್ಮನಿಯಿಂದ ಹೊರಟು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ಗೆ ಬರುವ ವಿಮಾನದಲ್ಲಿ ಪ್ರಜ್ವಲ್ ರೇವಣ್ಣಗೆಂದು ಟಿಕೆಟ್ ಬುಕ್ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲೇ ಎಸ್‌ಐಟಿ ಅಧಿಕಾರಿಗಳು ಅರೆಸ್ಟ್ ವಾರಂಟ್ ನೀಡಿ ಪ್ರಜ್ವಲ್ ರೇವಣ್ಣ ಅವರನ್ನು ವಶಕ್ಕೆ ಪಡೆಯಲು ಸಜ್ಜಾಗಿದೆ.

ಇತ್ತ ಪ್ರಜ್ವಲ್ ರೇವಣ್ಣ ಕೂಡ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ತಮ್ಮ ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಬುಧವಾರ ಈ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿದೆ. ನ್ಯಾಯಾಲಯ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿದ ಪರಿಣಾಮ ನಿರೀಕ್ಷಣಾ ಜಾಮೀನು ಪಡೆದು ಬಂಧನದಿಂದ ತಪ್ಪಿಸಿಕೊಳ್ಳುವ ಪ್ರಜ್ವಲ್ ರೇವಣ್ಣ ಅವರ ಲೆಕ್ಕಾಚಾರ ತಲೆಕೆಳಗಾಗಿದೆ. ಈ ಬೆಳವಣಿಗೆಗಳಿಂದ ಪ್ರಜ್ವಲ್ ಮಗದೊಮ್ಮೆ ವಿಮಾನದ ಟಿಕೆಟ್ ರದ್ದುಗೊಳಿಸಿ, ರಾಜ್ಯಕ್ಕೆ ಆಗಮಿಸುವ ಯೋಚನೆಯನ್ನು ಮುಂದೂಡಬಹುದು ಎಂಬ ಸಂಶಯವೂ ಮೂಡಿದೆ. ಪ್ರಜ್ವಲ್ ರೇವಣ್ಣ ಇತ್ತೀಚಿಗೆ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಅದರಲ್ಲಿ ಮೇ 31ರಂದು ಬೆಳಗ್ಗೆ 10.30ಕ್ಕೆ ಎಸ್‌ಐಟಿ ಅಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದರು. ಅಷ್ಟರಲ್ಲಿ ತಾನು ನಿರೀಕ್ಷಣಾ ಜಾಮೀನು ಪಡೆಯಬಹುದು. ಬಳಿಕ ವಿಚಾರಣೆಗೆ ಹಾಜರಾಗಿ ಬಂಧನದಿಂದ ತಪ್ಪಿಸಿಕೊಳ್ಳಬಹುದು ಎಂದು ಯೋಜಿಸಿದ್ದರು ಎನ್ನಲಾಗಿದೆ. ಅಕಸ್ಮಾತ್ ಗುರುವಾರ ಮಧ್ಯರಾತ್ರಿ ವಿಮಾನವನ್ನೇರಿದರೆ ಪ್ರಜ್ವಲ್ ರೇವಣ್ಣ ಬಂಧನವಾಗುವುದು ಖಚಿತವಾಗಲಿದೆ.

   

Related Articles

error: Content is protected !!