ಉಡುಪಿ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ನಡೆಸುತ್ತಿಲ್ಲ, ಕಡು ಉಗ್ರ ಎಡಪಂಥೀಯರು ಸರ್ಕಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಆರೋಪಿಸಿದ್ದಾರೆ. ಅವರು ಗುರುವಾರ ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಘಟ ನಾಯಕರ ಸಮಾವೇಶದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ಬದಲು, ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ತನ್ನ ಶಿಕ್ಷಣ ನೀತಿಯನ್ನು ರಚಿಸಲು ಹಿಂದು ವಿರೋಧಿ ಮತ್ತು ರಾಷ್ಟ್ರೀಯತೆಯ ವಿರೋಧಿಗಳನ್ನು ನಿಯೋಜಿಸಿದ್ದಾರೆ ಆದರೆ ವರ್ಷ ಕಳೆದರೂ, ಶಿಕ್ಷಣ ನೀತಿ ಇನ್ನು ರಚನೆಯಾಗಿಲ್ಲ. ಇಡೀ ದೇಶದಲ್ಲಿಯೇ ಶಿಕ್ಷಣ ವೇಗದಿಂದ ಸಾಗುತ್ತಿದ್ದರೂ, ರಾಜ್ಯದಲ್ಲಿ ಎನ್‌ಇಪಿಯೂ ಇಲ್ಲ, ಎಸ್‌ಇಪಿಯೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಸಿಎಂ ಸಿದ್ದರಾಮಯ್ಯ ಅವರಿಗೆ ಸ್ಥಾನ ಉಳಿಸಿಕೊಳ್ಳುವ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಅದನ್ನು ಅತಿಕ್ರಮಿಸಿಕೊಳ್ಳುವ ಹೋರಾಟವೇ ಮುಖ್ಯವಾಗಿದೆ. ಜೂ. 4 ರಂದು ಇವರಿಬ್ಬರ ಕನಸುಗಳಿಗೆ ಜನರು ಎಳ್ಳು ನೀರು ಬಿಡಲಿದ್ದಾರೆ ಎಂದವರು ಭವಿಷ್ಯ ನುಡಿದರು.
ಬಿಜೆಪಿ ಶಾಸಕರನ್ನು ಬೇಡ, ಕಾಂಗ್ರೆಸ್ ಶಾಸಕರನ್ನೇ ಕೇಳಿದರೂ ಅನುದಾನ ಬಿಡಿ ಸಿಬ್ಬಂದಿಗೆ ಸಂಬಳ ಕೊಡುವುದಕ್ಕೂ ಅನುದಾನ ಬಂದಿಲ್ಲ ಎನ್ನುತ್ತಿದ್ದಾರೆ. ಸರ್ಕಾರದ ಗ್ಯಾರಂಟಿಯ ಅಕ್ಕಿ ಪೂರೈಕೆ ನಿಂತಿದೆ. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಉಳಿದ ಗ್ಯಾರಂಟಿಗಳೂ ನಿಲ್ಲುತ್ತವೆ. ಕರ್ನಾಟಕದ ಸ್ಥಿತಿಯೂ ತೆಲಂಗಾಣದಂತಾಗುತ್ತದೆ ಎಂದವರು ಹೇಳಿದರು
ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಕಿಶೋರ್‌ಕುಮಾರ್ ಕುಂದಾಪುರ, ಪರಿಷತ್ ವಿಪಕ್ಷ ನಾಯಕ ಕೋಟ al ಶ್ರೀನಿವಾಸ್ ಪೂಜಾರಿ, ಶಾಸಕರಾದ ಯಶ್ವಾಲ್ ಸುವರ್ಣ, ವಿ. ಸುನೀಲ್ ಕುಮಾರ್, ಗುರುರಾಜ್ ಶೆಟ್ಟಿ, ಗಂಟಿಹೊಳೆ, ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್‌ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿಸುರೇಶ್ ನಾಯಕ್, ಮುಖಂಡ ಪ್ರಮೋದ್ ಮಧ್ವರಾಜ್, ವಿಕಾಸ್ ಪುತ್ತೂರು ಉಪಸ್ಥಿತರಿದ್ದರು. ಜಿ.ಪ್ರ.ಕಾರ್ಯದರ್ಶಿ ದಿನಕರ್‌ಶೆಟ್ಟಿ ಹೆರ್ಗ ಸ್ವಾಗತಿಸಿದರು. ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು