ಉಡುಪಿ : ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಸಂದೇಶವನ್ನು ಈ ಬಾರಿಯ ಚುನಾವಣೆ ಸಾಬೀತುಪಡಿಸಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.
ಅವರು ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಡಾ! ಧನಂಜಯ ಸರ್ಜಿ ಮತ್ತು ಎಸ್. ಎಲ್. ಭೋಜೇಗೌಡ ಅವರ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ಮುಂದಿನ 3 ವರ್ಷದ ಅವಧಿಗೆ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದಾಗ ಇದು ಚುನಾವಣೆ ಪರ್ವ ಎಂದಿದ್ದೆ. ಈಗಾಗಲೇ ನಡೆದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಅಂತರದಿಂದ ಬಿಜೆಪಿ ಅದ್ಭುತ ಗೆಲುವು ಸಾಧಿಸಿದೆ. ಗೆಲುವಿನ ಅಂತರ ಸ್ವತಃ ಅಭ್ಯರ್ಥಿಯನ್ನೇ ಅಚ್ಚರಿಗೊಳಿಸಿದೆ. ಇತ್ತೀಚೆಗೆ ನಡೆದ ನೈರುತ್ಯ ಪದವೀಧರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್.ಡಿ.ಎ ಅಭ್ಯರ್ಥಿಗಳು ಪ್ರಚಂಡ ಗೆಲುವು ಸಾಧಿಸುವ ಮೂಲಕ ನಮ್ಮದು ಗೆಲುವಿನ ಪರ್ವವಾಗಿ ಮಾರ್ಪಟ್ಟಿದೆ. ಅಭ್ಯರ್ಥಿಯ ಆಯ್ಕೆ ಸಂದರ್ಭದಲ್ಲಿ ಆಸೆ, ಆಕಾಂಕ್ಷೆಗಳು ಸಹಜ. ಆದರೆ, ಪಕ್ಷ ಅಭ್ಯರ್ಥಿ ಆಯ್ಕೆ ಮಾಡಿದ ಬಳಿಕ ಅವರನ್ನು ಬೆಂಬಲಿಸುವುದು ಪಕ್ಷ ನಿಷ್ಠೆ ಮತ್ತು ಧರ್ಮ ಎಂದೆನಿಸುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಬದ್ಧತೆಯಿಂದ ಪ್ರಾಮಾಣಿಕವಾಗಿ ತೊಡಗಿಸಿಕೊಂಡ ಪಕ್ಷದ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಜೊತೆಗೆ ಪ್ರಚಂಡ ಗೆಲುವು ಸಾಧಿಸಿದ ಡಾ! ಧನಂಜಯ ಸರ್ಜಿ ಮತ್ತು ಎಸ್. ಎಲ್. ಭೋಜೇಗೌಡ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಉಡುಪಿಯವರೇ ಆದ ಮಾಜಿ ಶಾಸಕ ರಘುಪತಿ ಭಟ್ ಸ್ಪರ್ಧೆಗಿಳಿದಾಗ ಸ್ವಲ್ಪ ಆತಂಕವಿತ್ತು. ಆದರೆ, ಭಟ್ ಅವರ ಅಭಿಮಾನಿಗಳಾಗಿದ್ದರೂ ಕಾರ್ಯಕರ್ತರು ಪಕ್ಷ ಬೆಂಬಲಿತ ಅಭ್ಯರ್ಥಿಯನ್ನೇ ಬೆಂಬಲಿಸಿದ್ದಾರೆ. ಜೊತೆಗೆ ಮೈತ್ರಿ ಅಭ್ಯರ್ಥಿಯ ಗೆಲುವಿಗೂ ಕಾರಣರಾಗಿದ್ದಾರೆ.
ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಚಿಂತನೆಯ ಪಕ್ಷದ ತತ್ವಕ್ಕೆ ವಿರೋಧವಾಗಿ ಪಕ್ಷ ತ್ಯಜಿಸಿದವರಿಗೆ ಏನಾಗುತ್ತದೆ ಎಂಬುದು ಈ ಬಾರಿಯ ಚುನಾವಣೆ ಸ್ಪಷ್ಟಪಡಿಸಿದೆ. ಮುಂದಿನ ದಿನಗಳಲ್ಲಿ ಪಕ್ಷ ಬಿಟ್ಟು ಹೋಗುವವರಿಗೆ ಇದು ಎಚ್ಚರಿಕೆಯ ಗಂಟೆ ಎಂದರು.