ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ
ಬೈಂದೂರು: ಭಾಗ್ಯ ಬಿಡಿ ಬಸ್ಸು ಕೊಡಿ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ವಿದ್ಯಾರ್ಥಿಗಳು ಈ ಕೂಡಲೇ ಬೈಂದೂರು ಗ್ರಾಮಾಂತರ ಭಾಗಗಳಿಗೆ ಸರ್ಕಾರಿ ಬಸ್ ಸೇವೆ ಒದಗಿಸುವಂತೆ ಒತ್ತಾಯಿಸಿದರು.
ಉಚಿತ ಬಸ್ ಸೇವೆಯಿಂದಾಗಿ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಹೋಗಲು ಬಸ್ ಇಲ್ಲದೇ ಅಲೆದಾಡುವಂತಾಗಿದೆ. ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗಲು, ವಾಪಸ್ ಮನೆ ತಲುಪುವುದು ಕಷ್ಟವಾಗುತ್ತಿದೆ. ಹೀಗಾಗಿ ತಕ್ಷಣವೇ ಅಗತ್ಯ ಎಲ್ಲ ರೂಟ್ ಗಳಿಗೂ ಹೆಚ್ಚಿನ ಸರ್ಕಾರಿ ಬಸ್ ಸೇವೆ ಒದಗಿಸಬೇಕು. ಇಲ್ಲವಾದರೆ ಹೋರಾಟ ಇನ್ನಷ್ಟು ತೀವ್ರಗೊಳಿಸಲಿದ್ದೇವೆ ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭಾಗವಹಿಸಿ, ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡಿದರು.
ನಂತರ ಮಾತನಾಡಿ, ಸರ್ಕಾರ ಹಾಗೂ ಕೆಎಸ್ ಆರ್ ಟಿಸಿ ಅಧಿಕಾರಿಗಳು ವಿದ್ಯಾರ್ಥಿಗಳ ಪ್ರೆಶ್ನೆಗೆ ಉತ್ತರ ಕೊಡಬೇಕು, ಅವರ ಸಮಸ್ಯೆಯನ್ನು ಕೇಳಿ ಅದಕ್ಕೆ ಏನು ಪರಿಹಾರ ಕೊಡ್ತಿರಿ ಕೊಡಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾದರೆ ಅವರೊಂದಿಗೆ ಶಾಸಕನಾಗಿ ನಾನು ಕೂಡ ಮಕ್ಕಳೊಂದಿಗೆ ಪ್ರತಿಭಟನೆಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು KSRTC ಅಧಿಕಾರಿಗಳಿಗೆ ಎಚ್ಚರಿಸಿದರು.
ಒಂದು ವಾರದ ಒಳಗೆ ಸಮಸ್ಯೆ ಬಗೆಹರಿಸದೆ ಇದ್ದರೆ ರಸ್ತೆ ತಡೆ ಮಾಡಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.
ಬಿಟ್ಟಿ ಭಾಗ್ಯಗಳಿಂದ ಅನಾಹುತಗಳೇ ಹೆಚ್ಚಾಗುತ್ತಿದೆ ಹೊರತು ಪ್ರಯೋಜನಗಳು ಆಗುತ್ತಿಲ್ಲ. ನಾವು ಹಣ ಕೊಟ್ಟು ಬರುತ್ತೇವೆ. ನಮಗೆ ಬಸ್ ವ್ಯವಸ್ಥೆ ಸರಿಯಾಗಿ ಕೊಡಿ ಎಂದು ವಿದ್ಯಾರ್ಥಿನಿಯರು ಧ್ವನಿ ಎತ್ತಿದರು.
ತಹಶೀಲ್ದಾರ್ ಶೋಭಲಕ್ಷ್ಮಿ, ABVP ಸಂಚಾಲಕ ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ, ಸಹ ಸಂಚಾಲಕ ದರ್ಶನ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸಂಹಿತಾ ಮತ್ತು ಪ್ರಮುಖರಾದ ಆಕಾಶ್, ಅಜಿತ್ ಜೋಗಿ, ಶ್ರೀವತ್ಸ, ನವೀನ್, ರಮೇಶ್, ಲಕ್ಷ್ಮೀಕಾಂತ್, ಶಬರಿ, ರಾಜೇಶ್ವರಿ, ರಶ್ಮಿ, ವಿನಾಯಕ್ ಮತ್ತಿತರರಿದ್ದರು.
ತಕ್ಷಣವೇ ಬಸ್ ವ್ಯವಸ್ಥೆ ಆಗಬೇಕು
ಮಳೆಗಾಲ ಆರಂಭವಾಗಿದೆ. ಜನರ ಸಂಚಾರಕ್ಕೆ ಬೈಂದೂರು ಕ್ಷೇತ್ರದ ವಿದ್ಯಾರ್ಥಿಗಳು ಸೇರಿದಂತೆಸಾರ್ವಜನಿಕರಿಗೆ ಹಲವು ರೂಟ್ ಗಳಿಗೆ ತುರ್ತು ಬಸ್ ಸೇವೆ ಅಗತ್ಯವಿದೆ. ಖಾಸಗಿ ಬಸ್ ಗಳು ಓಡಾಡುವ ರೂಟ್ ಹೊರತುಪಡಿಸಿ ಅನೇಕ ಕಡೆಗಳಲ್ಲಿ ಬಸ್ ಸೇವೆ ಇಲ್ಲ. ಕೆಎಸ್ಆರ್ಟಿಸಿ ಅಧಿಕಾರಿಗಳು ತಕ್ಷಣವೇ ಎಲ್ಲ ರೂಟ್ ಗಳಿಗೂ ಸರ್ಕಾರಿ ಬಸ್ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಎಲ್ಲೆಲ್ಲಿ ಬಸ್ ಸೇವೆ ಅಗತ್ಯವಿದೆಯೋ ಆ ಎಲ್ಲ ಕಡೆಗಳಲ್ಲೂ ಉಗ್ರ ಪ್ರತಿಭಟನೆ ನಡೆಸಲಾಗುವುದು. ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಅಗತ್ಯ ಇರುವ ಕಡೆಗಳಿಗೆ ತುರ್ತು ನೆಲೆಯಲ್ಲಿ ಬಸ್ ಸೇವೆ ಒದಗಿಸಲೇ ಬೇಕು. ಇಲ್ಲವಾದರೆ ಮುಂದೆ ಡಿಪೋ ಗಳಿಗೆ ಮುತ್ತಿಗೆ ಹಾಕಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಶಾಸಕ ಗುರುರಾಜ ಗಂಟಿಹೊಳೆಯವರು ಎಚ್ಚರಿಕೆ ನೀಡಿದ್ದಾರೆ.
ಅನೇಕ ರೂಟ್ ಗಳಿಗೆ ಬಸ್ ಸೇವೆ ಅಗತ್ಯ ಇರುವ ಬಗ್ಗೆ ಈಗಾಗಲೇ ಸರ್ಕಾರ ಹಾಗೂ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಅಷ್ಟಾದರೂ ಇಂತಹ ವಿಳಂಬ ವರ್ತನೆ ಮಾಡುವುದು ಸರಿಯಲ್ಲ. ಜನರ ಅನುಕೂಲಕ್ಕಾಗಿ ಅಗತ್ಯ ಹೆಚ್ಚುವರಿ ಬಸ್ ಸೇವೆ ನೀಡಬೇಕು ಎಂದರು