ಬೆಂಗಳೂರು : ರಾಜ್ಯದ ಐವರು ಸಂಸದರು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅದರಲ್ಲಿ ಮೂವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ದೊರೆತಿದ್ದು, ಇಬ್ಬರಿಗೆ ರಾಜ್ಯ ಖಾತೆ ಸಚಿವ ಸ್ಥಾನ ದೊರೆತಿದೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವರಾಗಿದ್ದ ಪ್ರಹ್ಲಾದ್ ಜೋಶಿ ಹಾಗೂ ನಿರ್ಮಲಾ ಸೀತಾರಾಮನ್ ಅವರು ಸಂಪುಟ ದರ್ಜೆ ಸಚಿವರಾಗಿ ಹಾಗೂ ಶೋಭಾ ಕರಂದ್ಲಾಜೆ ಹಾಗೂ ತುಮಕೂರು ಸಂಸದ ವಿ.ಸೋಮಣ್ಣ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2ನೇ ಬಾರಿ ಕೇಂದ್ರ ಸಚಿವ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಹ್ಲಾದ್ ಜೋಶಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2004ರಿಂದಲೂ ಅವರು ನಿರಂತರವಾಗಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗುತ್ತಿದ್ದು, 2024ರಲ್ಲಿ 5ನೇ ಬಾರಿ ಕೂಡ ಆಯ್ಕೆಯಾಗಿ ಸಚಿವರಾಗಿದ್ದಾರೆ.
2019ರಿಂದ 2024ರವರೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾಗಿ, ಕೇಂದ್ರ ಸರ್ಕಾರ ಟೀಕೆಗಳನ್ನು ಎದುರಿಸುವ ಸಂದರ್ಭ, ಸರ್ಕಾರದ ಯೋಜನೆಗಳನ್ನು ಲೋಕಸಭೆಯಲ್ಲಿ ಮಂಡಿಸುವಾಗ ಸಮರ್ಥವಾಗಿ ಎದುರಿಸಿದ್ದಾರೆ. ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವರಾಗಿಯೂ ಇದೇ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದರು. 2014 – 2016ರ ಅವಧಿಯಲ್ಲಿ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.