ವರದಕ್ಷಿಣೆ ಕಿರುಕುಳ: ದೂರು ದಾಖಲು
ಕುಂದಾಪುರ : ವರದಕ್ಷಿಣೆಗಾಗಿ ಗಂಡ ಮತ್ತು ಅವರ ಮನೆಯವರು ಕಿರುಕುಳ ನೀಡುತ್ತಿರುವುದಾಗಿ ಯಳಜಿತ ನಿವಾಸಿ ಜಯಂತಿ(31ವರ್ಷ) ದೂರು ನೀಡಿದ್ದಾರೆ. 2017ರಲ್ಲಿ ಮಂಡ್ಯ ಜಿಲ್ಲೆಯ ಚಾಮುಂಡೇಶ್ವರಿ ನಗರದ ನಿವಾಸಿ ಸುರೇಶ್ ಅವರೊಂದಿಗೆ ಮದುವೆಯಾಗಿದ್ದು, ವರದಕ್ಷಿಣೆಯಾಗಿ 16 ಪವನ್ ಚಿನ್ನ, 10 ಲಕ್ಷ ನಗದು, ಗಂಡನಿಗೆ 4 ಪವನ್ ಚಿನ್ನ ನೀಡಲಾಗಿತ್ತು. ಮದುವೆಯಾಗಿ ಹೋದ 2 ದಿನದಲ್ಲಿ ಮಂಡ್ಯದಲ್ಲಿ ಅತ್ತೆ ಲಕ್ಷ್ಮಮ್ಮ ಮತ್ತು ನಾದಿನಿ ರಾಜೇಶ್ವರಿ ಹೆಚ್ಚಿನ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲು ಆರಂಭಿಸಿದ್ದರು. ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಗಂಡ ಅತೀವ ಪೀಡನೆ ನೀಡಿದ್ದು ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದರು. ತಾಯಿ ಮನೆಯಲ್ಲಿ ಹಾಕಿದ್ದ ಒಡವೆ ಅಡವಿಟ್ಟು ಹಣ ಪಡೆದುಕೊಂಡಿದ್ದಲ್ಲದೆ ನನ್ನ ಹೆಸರಿನಲ್ಲಿ ಬುಲೆಟ್ ಬೈಕ್, ಕಾರು ಸಾಲ ಮಾಡಿಕೊಂಡು ಪಡೆದುಕೊಂಡಿದ್ದರು. ಕೆಲವು ದಿನಗಳ ಹಿಂದೆ ಮನೆಯಿಂದ ಹೊರಹಾಕಿದ್ದು ಜೀವ ಬೆದರಿಕೆಯೊಡ್ಡಿದ್ದಾರೆ. ವರದಕ್ಷಿಣೆಗಾಗಿ ಗಂಡ, ಅತ್ತೆ, ನಾದಿನಿ ಹಿಂಸೆ ನೀಡಿದ್ದಾರೆ ಎಂದು ಅವರು ದೂರಿನಲ್ಲಿ ವಿವರಿಸಿದ್ದು ಬೈಂದೂರು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಚಾಕು ತೋರಿಸಿ ಜಾನುವಾರು ಕಳವು
ಕುಂದಾಪುರ : ಶಿರೂರು ಪೇಟೆಯ ಮಂಜುನಾಥ ಹೋಟೆಲ್ ಎದುರು ಖಾಲಿ ಜಾಗದಲ್ಲಿ ಮಲಗಿದ್ದ ಗೋವು ಗಳನ್ನು ಮಹೇಂದ್ರ ಬೊಲೆರೊ ವಾಹನದಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ಕೃತ್ಯ ತಡೆಯಲು ಪ್ರಯತ್ನಿಸಿದ ಸ್ಥಳೀಯರೊಬ್ಬರಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಶ್ರೀಧರ ಬಿಜೂರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.