ಕುಂದಾಪುರ : ಕುಂದಾಪುರ ಸಮೀಪದ ತ್ರಾಸಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿಯ ಅಂಬಾ ಟಿವಿ ಹಾಗೂ ಹೋಂ ಅಪ್ಲಾಯನ್ಸಸ್ ಶೋರೂಂನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ ಸುಧಾಕರ ಶೆಟ್ಟಿ ಎಂಬವರಿಗೆ ಸೇರಿದ ಮಳಿಗೆ ಇದಾಗಿದ್ದು, ಶೋರೂಂನಲ್ಲಿಇಟ್ಟಿದ್ದ 3 ಲಕ್ಷ ರೂ. ನಗದು ಸೇರಿದಂತೆ ಅಂದಾಜು 2 ಕೋಟಿ ರೂ. ಗೂ ಮಿಕ್ಕಿ ನಷ್ಟ ಉಂಟಾಗಿದೆ.
ಭಾನುವಾರ ರಾತ್ರಿ 8.30ಕ್ಕೆ ಮಳಿಗೆ ಬಂದ್ ಮಾಡಿ, ಮನೆಗೆ ಹೋಗಿದ್ದು, ಆ ಬಳಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಈ ಅವಘಢ ಸಂಭವಿಸಿದೆ ಎನ್ನಲಾಗಿದೆ. ರಾತ್ರಿ 10 ಗಂಟೆಯ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ. ಶಾರ್ಟ್ ಸರ್ಕ್ಯೂಟ್ನಿಂದ ಮಳಿಗೆಯ ಕೆಳಗಿನ ಮಹಡಿಯಲ್ಲಿದ್ದ ಬಹುತೇಕ ಟಿ.ವಿ. ಫ್ರಿಡ್ಜ್, ವಾಸಿಂಗ್ ಮೇಷಿನ್, ಫ್ಯಾನ್ ಸೇರಿದಂತೆ ಬೆಲೆಬಾಳುವ ಗೃಹಪಯೋಗಿ ವಸ್ತುಗಳು, ಇಲೆಕ್ಟ್ರಾನಿಕ್ ಸೊತ್ತುಗಳು ಹಾಗೂ ಇನ್ನಿತರ ವಸ್ತುಗಳು ಸುಟ್ಟು ಕರಕಲಾಗಿದೆ. ಮೇಲಿನ ಮಹಡಿಯಲ್ಲಿ ಅಷ್ಟೊಂದು ಪ್ರಮಾಣದ ಹಾನಿಯಾಗದಂತೆ ತಡೆಯುವಲ್ಲಿ ಅಗ್ನಿ ಶಾಮಕ ದಳದ ತಂಡ ಯಶಸ್ವಿಯಾಗಿದೆ. ಮಳಿಗೆಯಲ್ಲಿ ಒಟ್ಟಾರೆ 3 ಕೋ.ರೂ. ಮೌಲ್ಯದ ಸೊತ್ತುಗಳು ದಾಸ್ತಾನಿದ್ದು ಈ ಪೈಕಿ 2 ಕೋ. ರೂ.ಗೂ ಮಿಕ್ಕಿ ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಂದಾಜಿಸಲಾಗಿದೆ.
ಬೈಂದೂರು, ಕುಂದಾಪುರ ಹಾಗೂ ಉಡುಪಿಯ 3 ಅಗ್ನಿ ಶಾಮಕ ದಳದ ವಾಹನಗಳು ಹಾಗೂ ಸಿಬಂದಿ ಆಗಮಿಸಿ, ಬೆಂಕಿ ನಂದಿಸುವ ಕಾರ್ಯ ಕೈಗೊಂಡರು