ಕೋಟ : ಕ.ಸಾ.ಪ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಘಟಕ ಆಶ್ರಯದಲ್ಲಿ,ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ, ಗೀತಾನಂದ ಫೌಂಡೇಶನ್ ಮಣೂರು-ಪಡುಕರೆ ಸಹಕಾರದಲ್ಲಿ ಬ್ರಹ್ಮಾವರ ತಾಲೂಕು 4ನೇ ಸಾಹಿತ್ಯ ಸಮ್ಮೇಳನ ಜೂ.11ರಂದು
ಸಾಲಿಗ್ರಾಮ-ಪಾರಂಪಳ್ಳಿಯ ಮಹಾವಿಷ್ಣು ಸಭಾಂಗಣದಲ್ಲಿ ನಿವೃತ್ತ ಮುಖ್ಯ ಶಿಕ್ಷಕ, ಸಾಹಿತಿ ಪಾರಂಪಳ್ಳಿ ನರಸಿಂಹ ಐತಾಳರ ಸರ್ವಾಧ್ಯಕ್ಷತೆಯಲ್ಲಿ ಜರಗಲಿರುವುದು.
ಈ ಪ್ರಯುಕ್ತ ಬೆಳಗ್ಗೆ 8.30ಕ್ಕೆ ಸಾಲಿಗ್ರಾಮ ಪ.ಪಂ. ಮುಖ್ಯಾಧಿಕಾರಿ ಶಿವ ನಾಯ್ಕ್ ಅವರು ರಾಷ್ಟ್ರ ಧ್ವಜಾರೋಹಣಗೈಯಲಿದ್ದು, ಕ.ಸಾ.ಪ. ಬ್ರಹ್ಮಾವರ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ಪರಿಷತ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅನಂತರ ಸಮ್ಮೇಳನ
ಮೆರವಣಿಗೆ, ಬೆಳಗ್ಗೆ 9.45ಕ್ಕೆ ಸಮ್ಮೇಳನದ ಉದ್ಘಾಟನೆ ನಡೆಯಲಿದ್ದು, ಉದ್ಯಮಿ ಆನಂದ ಸಿ.ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಕಿರಣ್ ಕುಮಾರ್ ಕೊಡ್ಗಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು ಹಾಗೂ ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡುವರು. ಬೆಳಗ್ಗೆ 11.45ಕ್ಕೆ ಬ್ರಹ್ಮಾವರ ತಾಲೂಕಿನ ವಿಶೇಷಗಳು ಒಂದು ಬೀಸು ನೋಟ ವಿಶೇಷ ಉಪನ್ಯಾಸ ನಡೆಯಲಿದೆ. ಅನಂತರ ನೃತ್ಯ ವೈವಿಧ್ಯ, ಬಹುವಿಧಗೋಷ್ಠಿ, ಅಪರಾಹ್ನ 2.30ಕ್ಕೆ ಯಕ್ಷ ಲಯ-ವಿನ್ಯಾಸ ಕಾರ್ಯಕ್ರಮ,ಸಮ್ಮೇಳನಾಧ್ಯಕ್ಷರೊಂದಿಗೆ ಮಾತುಕತೆ ನಡೆಯಲಿದ್ದು, 4ಗಂಟೆಗೆ ಸಮಾರೋಪ ಸಮಾರಂಭದಲ್ಲಿ
ಸಾಧಕರಿಗೆ ಸಮ್ಮಾನ ನಡೆಯಲಿದೆ. ಸಭಾ ಕಾರ್ಯಕ್ರಮದ ಅನಂತರ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕ.ಸಾ.ಪ. ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ತಿಳಿಸಿದ್ದಾರೆ.