ಪರಿಶುದ್ಧ ಜ್ಞಾನ
ಮನಸ್ಸಿನ ಮೂಲ ಸ್ವಭಾವಗಳಲ್ಲಿ ಸ್ವಾರ್ಥವೂ ಒಂದು. ಈ ಸ್ವಾರ್ಥದ ಫಲವಾಗಿಯೇ ಮನುಷ್ಯ ತನ್ನಲ್ಲಿ ಸಂಗ್ರಹ ಬುದ್ಧಿಯನ್ನು ಬೆಳೆಸಿಕೊಳ್ಳತೊಡಗುತ್ತಾನೆ. ಬಾಲಿಶ ಮನೋಸ್ಥಿತಿಯಲ್ಲಿ ಮನುಷ್ಯ ಸಂಗ್ರಹಿಸಿಟ್ಟುಕೊಳ್ಳುವುದು ತನ್ನ ದೇಹ ಸುಖಕ್ಕೆ ಅಗತ್ಯವಾದ ವಸ್ತುಗಳನ್ನು, ಪರಿಕರಗಳನ್ನು, ಸಿರಿ–ಸಂಪತ್ತಿನ ಸಂಗ್ರಹಣೆಯೂ ಈ ವರ್ಗಕ್ಕೇ ಸೇರುತ್ತದೆ. ಬದುಕಿನ ಅಭದ್ರತೆ, ಅಭಾವದ ಬಗೆಗಿನ ಭಯ ಈ ಸಂಗ್ರಹ ಬುದ್ಧಿಯಲ್ಲಿ ವ್ಯಕ್ತವಾಗುತ್ತದೆ. ಮನಸ್ಸು ಕೊಂಚ ವಿಕಸಿತವಾದರೆ ಮನುಷ್ಯ ಜ್ಞಾನಸಂಗ್ರಹದ ಬುದ್ಧಿಯನ್ನು ಬೆಳೆಸಿಕೊಳ್ಳುತ್ತಾನೆ. ತಾನು ಬಹಳಷ್ಟು ವಿಚಾರಗಳನ್ನು ತಿಳಿದುಕೊಳ್ಳಬೇಕು ಮತ್ತು ತನಗೆ ಅದರಿಂದ ಪ್ರಾಪಂಚಿಕ ಪ್ರಯೋಜನಗಳು ಒದಗಬೇಕು ಎಂದು ಆತ ಆಸೆ ಪಡುತ್ತಾನೆ. ಇಂದಿನ ಜಾಗತೀಕರಣದ ದಿನಗಳಲ್ಲಿ ‘ಜ್ಞಾನ’ವೆನ್ನುವುದನ್ನು ನಾವು ‘ಮಾಹಿತಿ’ ಭಾವಿಸಿದ್ದು ಅದೇ ನಮಗೆ ಸಂಪತ್ತು ಗಳಿಕೆಯ ಬಂಡವಾಳವಾಗಿದೆ. ಆದರೆ ನಿಜವಾದ ಜ್ಞಾನ ಇವೆಲ್ಲವನ್ನೂ ಮೀರಿದೆ. ಅದು ಆತ್ಮಜ್ಞಾನವಲ್ಲದೆ ಬೇರೇನೂ ಅಲ್ಲ. ನಮ್ಮನ್ನು ನಾವು ಸಂಪೂರ್ಣವಾಗಿ ಬರಿದು ಮಾಡಿಕೊಳ್ಳದೇ ಅದು ಎಷ್ಟು ಮಾತ್ರಕ್ಕೂ ದಕ್ಕುವುದಿಲ್ಲ. ಕೃಷ್ಣ ಅರ್ಜುನನಿಗೆ ಬೋಧಿಸುವುದು ಇದೇ ಪರಿಶುದ್ಧವಾದ ಆತ್ಮಜ್ಞಾನವನ್ನು. ಮನಸ್ಸು ಮತ್ತು ಇಂದ್ರಿಯಗಳನ್ನು ಜಯಿಸದೇ ಆತ್ಮಸಾಧನೆ ಅಸಾಧ್ಯ. ಈ ಸಾಧನೆಗೆ ತೊಡಗದವನಲ್ಲಿ ಶ್ರೇಷ್ಠವಾದ ಬುದ್ಧಿಯಾಗಲೀ ಆಸ್ತಿಕ ಭಾವವಾಗಲೀ ಇರುವುದಿಲ್ಲ. ಅದರಿಂದಾಗಿ ಆತನಿಗೆ ಶಾಂತಿ ಮತ್ತು ಸುಖ ದೊರೆಯುವ ಮಾತೇ ಇಲ್ಲ.