ಕೋಟ: ಪ್ರತಿಯೊಬ್ಬರು ಗಿಡದ ಮಹತ್ವ ಅರಿತು ಅದನ್ನು ಪೋಷಿಸುವ ಕಾರ್ಯ ಮಾಡಬೇಕು ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್.ಸಿ.ಕುಂದರ್ ಹೇಳಿದರು.
ಗುರುವಾರ ಮೂಡುಗಿಳಿಯಾರು ಸಂಯುಕ್ತ ಪ್ರೌಢಶಾಲಾ ವಠಾರದಲ್ಲಿ ಮಣೂರು ಗೀತಾನಂದ ಫೌಂಡೇಶನ್ ಹಮ್ಮಿಕೊಂಡ ಸಹಸ್ರ ಗಿಡ ನಡುವ ಸಂಕಲ್ಪ ಯೋಜನೆಯ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಮುಂದಿನ ಭವಿಷ್ಯಕ್ಕಾಗಿ ಹಸಿರು ಕ್ರಾಂತಿ ಪಸರಿಸಬೇಕಾದ ಅಗತ್ಯತೆಯನ್ನು ವಿದ್ಯಾರ್ಥಿಗಳಿಗೆ ಮನಗಾಣಿಸಿದರಲ್ಲದೆ ಕಾಂಕ್ರೀಟ್ ಕಾಡು ನಿರ್ಮಾಣದಿಂದ ಉಂಟಾಗುತ್ತಿರುವ ಉಷ್ಣತೆಯನ್ನು ತಗಿಸಲು ನಮ್ಮ ಸಂಸ್ಥೆ 15ಸಾವಿರ ಗಿಡ ನಡುವ ಕಾರ್ಯಕ್ರಮ ಹಮ್ಮಿಕೊಂಡಿದೆ ಇದಕ್ಕೆ ಪ್ರತಿಯೊಬ್ಬರು ಕೈಜೋಡಿಸಿ ಎಂದು ಕರೆಕೊಟ್ಟರಲ್ಲದೆ,ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕಾ ಪಣತೊಡಿ ಎಂದರು.
ಇದೇ ವೇಳೆ ಶಾಲಾ ವಠಾರದಲ್ಲಿ ಒಂದಿಷ್ಟು ಗಿಡಗಳನ್ನು ನಡಲಾಯಿತು.ವಿದ್ಯಾರ್ಥಿಗಳಿಗೆ ಗಿಡ ವಿತರಿಸಿ ಅದರ ಮಹತ್ವವನ್ನು ನೀಡಲಾಯಿತು.
ಈ ವೇಳೆ ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಪಾಂಡು ಪೂಜಾರಿ,ಸದಸ್ಯರಾದ ಅಜಿತ್ ದೇವಾಡಿಗ,ಯೋಗೇಂದ್ರ ಪೂಜಾರಿ,ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಮೇಶ್ ಉಪಸ್ಥಿತರಿದ್ದರು. ಜನತಾ ಫಿಶ್ಮಿಲ್ ವ್ಯವಸ್ಥಾಪಕ ಶ್ರೀನಿವಾಸ ಕುಂದರ್ ಪ್ರಸ್ತಾವನೆ ಸಲ್ಲಿಸಿದರು.
ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕ ಅಶೋಕ್ ಸೋಮಯಾಜಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಹ ಶಿಕ್ಷಕ ವಿಜಯ ಕುಮಾರ್ ನಿರೂಪಿಸಿದರು. ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕಾಂಚನ್ ಕೋಟ ವಂದಿಸಿದರು.